ಬೆಂಗಳೂರು: ಕರ್ನಾಟಕದಲ್ಲಿ ಒಂದೇ ಬಾರಿ ಮದ್ಯದ ದರ ಏರಿಕೆ ಮತ್ತು ಇಳಿಕೆ ಎರಡೂ ಆಗುತ್ತಿದೆ! ಹೌದು, ರಾಜ್ಯದಲ್ಲಿ ಜುಲೈ 1ರಿಂದ ಏಕಕಾಲಕ್ಕೆ ಮದ್ಯದ ದರದಲ್ಲಿ ಏರಿಳಿತ ಆಗುತ್ತಿದೆ. ದುಬಾರಿ ಬೆಲೆಯ ಮದ್ಯಗಳ ದರ (Liquor Price) ಕಡಿಮೆ ಆಗುತ್ತಿದ್ದು, ಈವರೆಗೆ ಕಡಿಮೆ ಹಣಕ್ಕೆ ಮಾರಾಟ ಆಗುತ್ತಿದ್ದ ಮದ್ಯಗಳು ದುಬಾರಿ ಆಗುತ್ತಿವೆ.
ಈ ಮದ್ಯಗಳ ಬೆಲೆ ಇಳಿಕೆ
ಇದೇ ಜುಲೈ 1ರಿಂದ ರಾಜ್ಯದಲ್ಲಿ ಬಿಯರ್ ಸೇರಿ ಪ್ರೀಮಿಯಂ ಮದ್ಯದ ಬ್ರಾಂಡ್‌ಗಳ ಬೆಲೆಗಳಲ್ಲಿ ಗಣನೀಯ ಇಳಿಕೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.ಮುಂದಿನ ತಿಂಗಳು ಜಾರಿಗೆ ಬರಲಿರುವ ರಾಜ್ಯ ಸರ್ಕಾರದ ಕರಡು ಅಧಿಸೂಚನೆಯು ಹೈ-ಎಂಡ್ ಮದ್ಯದ ವಿಧಗಳ ಮೇಲಿನ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿದೆ. ಇದು ಮದ್ಯದ ದರ ಇಳಿಕೆಗೆ ಕಾರಣವಾಗಿದ್ದು, ಮದ್ಯ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ. ನೆರೆ ರಾಜ್ಯಗಳಲ್ಲಿ ಮದ್ಯ ಮಾರಾಟದ ಬೆಲೆಯ ಜೊತೆ ಸ್ಪರ್ಧೆಯನ್ನು ಒಡ್ಡಲು ಸರ್ಕಾರವು 16 ವಿವಿಧ ವರ್ಗಗಳ ಪ್ರೀಮಿಯಂ ಮದ್ಯದ ದರಗಳನ್ನು ಪರಿಷ್ಕರಿಸಿದೆ. ಈ ಕ್ರಮವು ಸೆಮಿ ಪ್ರೀಮಿಯಂ ಮತ್ತು ಇತರ ಬ್ರ್ಯಾಂಡ್‌ಗಳ ಮದ್ಯವನ್ನು ಸ್ಥಳೀಯವಾಗಿ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದಾಗಿ ಅಗ್ಗದ ಮದ್ಯಕ್ಕಾಗಿ ಬೇರೆ ರಾಜ್ಯಗಳನ್ನು ಆಶ್ರಯಿಸುವ ಬದಲು ಕರ್ನಾಟಕದಲ್ಲೇ ಖರೀದಿಸಲು ಅವಕಾಶ ಆಗಲಿದೆ ಎಂಬುದು ಸರ್ಕಾರದ ನಿಲುವಾಗಿದೆ.
ಮದ್ಯಗಳ ಪರಿಷ್ಕೃತ ಬೆಲೆ 750 ಎಂಎಲ್ ಬಾಟಲ್ ಗ್ರಾಟಾ, ಈ ಹಿಂದೆ ರೂ. 2000. ಆಗಿದ್ದು, ಆದರೆ ಜುಲೈ 1ರಿಂದ 1700 ಮತ್ತು ರೂ. 1800. ನಡುವೆ ದೊರೆಯಲಿದೆ. ಅದೇ ರೀತಿ, 5000 ರೂ. ಆಸುಪಾಸಿನ ಮದ್ಯಗಳು 3600-3700 ರೂ.ಗೆ ಮತ್ತು 7100 ರೂ. ದರದ ಮದ್ಯ 5200 ರೂ.ಗೆ ಮಾರಾಟವಾಗಲಿದೆ. ಮದ್ಯವನ್ನು ಖರೀದಿಸಲು ಕಡಿಮೆ ದರ ಇರುವ ರಾಜ್ಯಗಳತ್ತ ಮದ್ಯಪ್ರಿಯರು ತೆರಳುತ್ತಿದ್ದರು. ಆದರೆ ಕರ್ನಾಟಕದಲ್ಲಿಯೇ ಮದ್ಯದ ದರವನ್ನು ಇಳಿಕೆ ಮಾಡುವ ಮೂಲಕ ಮದ್ಯಪ್ರಿಯರು ರಾಜ್ಯದಲ್ಲೇ ಮದ್ಯ ಖರೀದಿಗೆ ಮುಂದಾಗಲಿ ಎಂಬ ಉದ್ದೇಶವನ್ನು ಈ ನಿರ್ಧಾರ ಹೊಂದಿದೆ.
ಈ ಮದ್ಯಗಳ ಬೆಲೆ ದುಬಾರಿ
ಅತಿ ಹೆಚ್ಚು ಮಾರಾಟವಾಗುವ ಕಡಿಮೆ ದರದ ಲಿಕ್ಕರ್ ದರ ಏರಿಕೆ ಆಗುವ ಸಾಧ್ಯತೆ ಇದ್ದು, 80-120 ರೂ. ಇರುವ ಲಿಕ್ಕರ್ ಬೆಲೆ ಶೇ.2ರಷ್ಟು ಏರಿಕೆ ಆಗಲಿದೆ.
ಯಾಕೆ ಲಿಕ್ಕರ್ ದರ ಏರಿಕೆ?
ಅಬಕಾರಿ ಇಲಾಖೆ ಮದ್ಯಗಳಿಗೆ ಈ ಮೊದಲು 18 ಸ್ಲಾಬ್ ಡ್ಯುಟಿ ಟ್ಯಾಕ್ಸ್ ವಿಂಗಡಣೆ ಮಾಡುತ್ತಿತ್ತು. ಇದೀಗ 16 ಸ್ಲ್ಯಾಬ್ ಆಗಿ ವಿಂಗಡಣೆ ಮಾಡಲಿದ್ದು, ಡ್ಯುಟಿ ಟ್ಯಾಕ್ಸ್ ದರ ನಿಗದಿಯನ್ನು ಈ ಸ್ಲ್ಯಾಬ್ ಆಧರಿಸಿ ನಿರ್ಧಾರ ಮಾಡಲಾಗುತ್ತಿದೆ. 18 ಸ್ಲ್ಯಾಬ್‌ನಿಂದ 16 ಸ್ಲ್ಯಾಬ್ ಮಾಡಿದ ಕಾರಣ ಕೆಲ ಮದ್ಯಗಳ ದರ ಏರಿಕೆ ಆಗಲಿದ್ದು, ಇನ್ನು ಕೆಲ ಮದ್ಯದ ದರ ಇಳಿಕೆ ಆಗಲಿದೆ.