ಪುಣೆ (ಮಹಾರಾಷ್ಟ್ರ): ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದ ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಬಾಲಾರೋಪಿಯನ್ನು (17 ವರ್ಷ) ರಿಲೀಸ್ ಮಾಡಲಾಗಿದೆ. ಅಬ್ಸರ್ವೇಶನ್ ಹೋಮ್‌ನಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಮೇ 19 ರಂದು ಮುಂಜಾನೆ ಕಲ್ಯಾಣಿ ನಗರದಲ್ಲಿ ಶ್ರೀಮಂತ ಬಿಲ್ಡರ್‌ನ ಪುತ್ರನಾದ ಅಪ್ರಾಪ್ತ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕಿಗೆ ಡಿಕ್ಕಿ ಹೊಡೆದಿತ್ತು.
ಘಟನೆಯಲ್ಲಿ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟ ಎಂಬುವರು ಮೃತಪಟ್ಟಿದ್ದರು. ಪೊಲೀಸರ ಪ್ರಕಾರ ಅಪ್ರಾಪ್ತ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದನು.
ಕೋರ್ಟ್ ಹೇಳಿದ್ದೇನು?
ನಾವು ಕಾನೂನು, ಬಾಲಾಪರಾಧಿ ಕಾಯಿದೆಯ ಗುರಿಗಳು ಮತ್ತು ಉದ್ದೇಶಗಳಿಗೆ ಬದ್ಧರಾಗಿದ್ದೇವೆ. ಅಪರಾಧದ ಗಂಭೀರತೆಯ ಹೊರತಾಗಿಯೂ ಅವರನ್ನು ವಯಸ್ಕರಿಂದ ಪ್ರತ್ಯೇಕವಾಗಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಯಾವುದೇ ಮಗುವಿನಂತೆ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರ ಪೀಠ ಹೇಳಿದೆ.
ಬಾಲಾರೋಪಿ ತಂದೆಯ ಮೇಲೆ ಕೇಸ್ ದಾಖಲು
ಮಹಾರಾಷ್ಟ್ರದ ಪುಣೆಯಲ್ಲಿ ಇಬ್ಬರನ್ನು ಬಲಿತೆಗೆದುಕೊಂಡ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಅಪ್ರಾಪ್ತ ಆರೋಪಿಯ ತಂದೆಗೆ ಜೂನ್ 21 ರಂದು ಪುಣೆ ನ್ಯಾಯಾಲಯವು ಜಾಮೀನು ನೀಡಿತ್ತು. ತಂದೆಯನ್ನು ಮೇ 21 ರಂದು ಔರಂಗಾಬಾದ್‌ನಿಂದ ಬಂಧಿಸಲಾಗಿತ್ತು. ಆರೋಪಿಯ ತಂದೆ ಮತ್ತು ಬಾಲಾಪರಾಧಿಗಳಿಗೆ ಮದ್ಯವನ್ನು ಪೂರೈಸಿದ ಬಾರ್ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು 77 ರ ಅಡಿಯಲ್ಲಿ ದಾಖಲಿಸಲಾಗಿದೆ.