ಚನ್ನಮ್ಮನ ಕಿತ್ತೂರು: ಮಕ್ಕಳ ಹಾಗೂ ಶಾಲೆಗಳ ಅಭಿವೃದ್ಧಿಗಳನ್ನು ಗಮನದಲ್ಲಿಟ್ಟುಕೊಂಡು ಪಾಲಕರು ಶ್ರಮ ವಹಿಸಬೇಕು. ಶಾಲೆಗಳ ಅಭಿವೃದ್ಧಿಯಲ್ಲಿ ಹಾಗೂ ಶಿಕ್ಷಣದಲ್ಲಿ ರಾಜಕೀಯ ಬೆರೆಸಬಾರದು ಎಂದು ಶಾಸಕ ಬಾಬಾ ಸಾಹೇಬ್ ಪಾಟೀಲ್ ಹೇಳಿದರು.
ಅವರು ಕಾದ್ರೊಳ್ಳಿ ಗ್ರಾಮದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಉತ್ತಮ ಶಿಕ್ಷಣ ದೊರಕಿಸುವುದರ ಮೂಲಕ ಮಕ್ಕಳನ್ನು ಆಸ್ತಿಯಾಗಿ ಮಾಡಬೇಕು. ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳು ಉತ್ತಮ ಸಾಧನೆಗಳನ್ನು ಮಾಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಪಾಲಕರು ಮಕ್ಕಳಲ್ಲಿನ ಮೊಬೈಲ್ ಗೀಳನ್ನು ತಪ್ಪಿಸಿ ಶಿಕ್ಷಣಕ್ಕೆ ಒತ್ತು ಕೊಡುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ಪಾಲಕರು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸಗಳ ಪ್ರಗತಿ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿ ಕುಂದು ಕೊರತೆಗಳನ್ನು ನೀಗಿಸುವಲ್ಲಿ ಸಹಾಯ ಹಸ್ತ ನೀಡಬೇಕು ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳನ್ನು ಅನಿಗೊಳಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ.
ಕಿತ್ತೂರು ಕ್ಷೇತ್ರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಪುನರ್ ನಿರ್ಮಾಣಕ್ಕೆ ಸರ್ಕಾರ ಅನುದಾನ ಮಂಜೂರಾತಿ ನೀಡಿದ್ದು ಕೆಲಸ ಭರದಿಂದ ಸಾಗಿದೆ ಎಂದರು.