ಬೆಂಗಳೂರು, ಜೂನ್ 22: ಪ್ರದೀಪ್ ಈಶ್ವರ್ ಅವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದೀರಿ. ಅವರ ಮಾತು, ಆಚಾರ ವಿಚಾರ ಪ್ರಚಾರ ಮಾಡಿ ವಿಧಾನಸೌಧಕ್ಕೆ ಬಂದಿದ್ದಾರೆ. ಶಿವಶಂಕರ್ ಅವರು ಪ್ರದೀಪ್ ಈಶ್ವರ್ ಅವರನ್ನು ನನ್ನ ಬಳಿ ಕರೆದುಕೊಂಡು ಬಂದಾಗ, ಯಾರೋ ಹುಚ್ಚನನ್ನು ಕರೆದುಕೊಂಡು ಬಂದಿದ್ದೀರಿ ಎಂದಿದ್ದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಶಿವಶಂಕರ್ ಅವರು ಇಲ್ಲ ಈತ ಉಪಯೋಗಕ್ಕೆ ಬರುತ್ತಾರೆ, ಒಂದು ಅವಕಾಶ ನೀಡಿ ಎಂದರು. ಅವರು ಈಗ ರಾಜ್ಯದಲ್ಲೇ ಹೊಸ ಇತಿಹಾಸ ಸೃಷ್ಟಿ ಮಾಡಿ ಶಾಸಕನಾಗಿದ್ದಾರೆ. ವಿಧಾನಸಭೆಯಲ್ಲೂ ತಮ್ಮ ಆಚಾರ, ವಿಚಾರ ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಒಬ್ಬ ವ್ಯಕ್ತಿ ಹಿಂದೆ ಎಷ್ಟು ಜನ ಇರುತ್ತಾರೆ ಎಂಬುದಕ್ಕಿಂತ ಒಬ್ಬ ವ್ಯಕ್ತಿ ಎಷ್ಟು ಜನ ನಾಯಕರನ್ನು ತಯಾರು ಮಾಡುತ್ತಾರೆ ಎಂಬುದು ಮುಖ್ಯ. ನಾಯಕರು ಎಂದರೆ ರಾಜಕಾರಣಿ ಮಾತ್ರವಲ್ಲ. ಎಲ್ಲಾ ವರ್ಗದಲ್ಲಿ ನಾಯಕತ್ವ ಗುಣ ಇರುವವರು. ಇಲ್ಲಿ ಅನೇಕ ವಿದ್ಯಾರ್ಥಿಗಳಿದ್ದೀರಿ. ಕೂಲಿ ಮಾಡುವವರು, ಚಾಲಕರ ಮಕ್ಕಳಿಗೂ ಇಂದು ನಾವು ಸನ್ಮಾನ ಮಾಡಿದ್ದೇವೆ. ಆ ಪೋಷಕರಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ.
ನಾನು ಇಂದು ಉಪಮುಖ್ಯಮಂತ್ರಿಯಾಗಿರಬಹುದು. ಆದರೆ ಒಂದು ಕಾಲದಲ್ಲಿ ನಾನು ಪದವೀಧರ ಆಗಲಿಲ್ಲ ಎಂಬ ಕೊರಗು ಇತ್ತು. ನಾನು ಮಂತ್ರಿಯಾದ ನಂತರ 48 ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ಪದವೀಧರನಾದೆ. ವಿಧಾನಸೌಧದ ಮುಂದೆ ಸಚಿವ ಸಂಪುಟ ಸಭೆಯಲ್ಲಿ ಮಂತ್ರಿಯಾಗಿದ್ದಕ್ಕಿಂತ ಮೈಸೂರಿನಲ್ಲಿ ಪದವೀಧರನಾಗಿ ಪ್ರಮಾಣಪತ್ರ ಪಡೆದಾಗ ಹೆಚ್ಚು ಸಂತೋಷವಾಯಿತು.