ರೈತರಿಗೆ ಸಂಪೂರ್ಣ ನೆರವಿನ ಭರವಸೆ ಕೊಟ್ಟ ಉತ್ತರ ಕನ್ನಡ ಜಿಲ್ಲಾಡಳಿತ
ಕಾರವಾರ, ಜೂನ್ 23: ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಜಿಲ್ಲಾಡಳಿತ ನಿಮ್ಮ ಸಂಪೂರ್ಣ ನೆರವಿಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು. ಜಿಲ್ಲೆಯಲ್ಲಿ 2019 ರಿಂದ 2023-24ನೇ ಸಾಲಿನ ವರೆಗೆ 43 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಿಸಿ ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ರೈತರ ಆತ್ಮಹತ್ಯೆ ಪ್ರಕರಣ ಕುರಿತ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಎಲ್ಲಾ ಸಮಸ್ಯೆಗಳಿಗೆ ಸಾವು ಒಂದೇ ಅಂತಿಮ ಪರಿಹಾರವಲ್ಲ. ದೇಶಕ್ಕೆ ಅನ್ನ ನೀಡುವ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬಾರದು, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಡಳಿತ ಸಂಪೂರ್ಣ ನೆರವು ನೀಡಲಿದೆ” ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.