ಪಟ್ನಾ: ನೀಟ್-ಯುಜಿ ಅಕ್ರಮ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ನಿಜ ಎಂದು ನಾಲ್ವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಪರೀಕ್ಷೆಯ ಹಿಂದಿನ ದಿನ ರಾತ್ರಿಯೇ ನಮಗೆ ಪ್ರಶ್ನೆಪತ್ರಿಕೆಯನ್ನು ನೀಡಿ, ಉತ್ತರಗಳನ್ನು ನೆನಪಲ್ಲಿಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು.
ಮಾರನೇ ದಿನ ಪರೀಕ್ಷೆ ವೇಳೆ ಅದೇ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಬಂಧಿತ ನೀಟ್ ಆಕಾಂಕ್ಷಿ ಹೇಳಿದ್ದಾರೆ.
ನೀಟ್ ಅವ್ಯವಹಾರ ಸಂಬಂಧ ಬಿಹಾರದಲ್ಲಿ ನೀಟ್ ಆಕಾಂಕ್ಷಿ ಅನುರಾಗ್ ಯಾದವ್, ಆತನ ಸಂಬಂಧಿ, ದಾನಾಪುರ ಮುನ್ಸಿಪಲ್ ಕೌನ್ಸಿಲ್‌ನ ಕಿರಿಯ ಎಂಜಿನಿಯರ್ ಸಿಕಂದರ್ ಹಾಗೂ ನಿತೀಶ್ ಕುಮಾರ್, ಅಮಿತ್ ಆನಂದ್ ಎಂಬ ನಾಲ್ವರನ್ನು ಬಂಧಿಸಲಾಗಿತ್ತು.
ಈ ಪೈಕಿ ಅನುರಾಗ್ ಯಾದವ್ ರಾಜಸ್ಥಾನದ ಕೋಟಾದಲ್ಲಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. “ಪ್ರಶ್ನೆಪತ್ರಿಕೆ ಸೋರಿಕೆಗೆ ಪ್ಲ್ರಾನ್ ಮಾಡಿದ್ದೇವೆ. ಎಲ್ಲ ವ್ಯವಸ್ಥೆ ಆಗಿದೆ.
ಕೋಚಿಂಗ್ ಎಲ್ಲ ನಿಲ್ಲಿಸಿ, ಕೂಡಲೇ ವಾಪಸ್ ಬಾ ಎಂದು ನನ್ನ ಅಂಕಲ್ ಸಿಕಂದರ್ ನನ್ನನ್ನು ಕರೆಸಿಕೊಂಡಿದ್ದರು. ಪರೀಕ್ಷೆ ಹಿಂದಿನ ದಿನ ರಾತ್ರಿ ನನಗೆ ಪ್ರಶ್ನೆಪತ್ರಿಕೆ ಕೊಟ್ಟರು.
ಉತ್ತರಗಳನ್ನು ಬಾಯಿಪಾಠ ಮಾಡಿಕೊಂಡು, ನೆನಪಲ್ಲಿಟ್ಟುಕೊಳ್ಳುವಂತೆ ಸೂಚಿಸಿ ದರು. ನಾನು ಹಾಗೆಯೇ ಮಾಡಿದೆ. ಮಾರನೇ ದಿನ ಪರೀಕ್ಷೆಯಲ್ಲಿ ಅದೇ ಪ್ರಶ್ನೆಗಳು ಬಂದಿದ್ದವು. ಅದಾದ ಬಳಿಕ ನನ್ನನ್ನು ಬಂಧಿಸಲಾಯಿತು. ನಾನೀಗ ತಪ್ಪೊಪ್ಪಿಕೊಂಡಿದ್ದೇನೆ’ ಎಂದು ಅನುರಾಗ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.