Breaking News
Home / ರಾಜಕೀಯ / ಬೆಳಗಾವಿ: ಇನ್ನೂ ಪೂರೈಕೆಯಾಗದ ಸಮವಸ್ತ್ರ

ಬೆಳಗಾವಿ: ಇನ್ನೂ ಪೂರೈಕೆಯಾಗದ ಸಮವಸ್ತ್ರ

Spread the love

ಬೆಳಗಾವಿ: 2024-25ನೇ ಸಾಲಿನ ತರಗತಿ ಆರಂಭವಾಗಿ ಮೂರು ವಾರವಾದರೂ, ಇನ್ನೂ ಹಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರದ ಬಟ್ಟೆ ವಿತರಣೆಯಾಗಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಹಳೇ ಸಮವಸ್ತ್ರದಲ್ಲೇ ಶಾಲೆಯತ್ತ ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ.

ಪ್ರತಿವರ್ಷ ಶಾಲಾ ಆರಂಭೋತ್ಸವ ದಿನವೇ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಸಮವಸ್ತ್ರದ ಬಟ್ಟೆ ನೀಡಲಾಗುತ್ತಿತ್ತು.

8ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ್‌ ಬಟ್ಟೆ ಕೊಡಲಾಗುತ್ತಿತ್ತು. ಈ ವರ್ಷದಿಂದ ತಮಗೂ ಚೂಡಿದಾರ್‌ ಬಟ್ಟೆ ಸಿಗುತ್ತದೆ ಎಂದು 6 ಮತ್ತು 7ನೇ ತರಗತಿ ವಿದ್ಯಾರ್ಥಿನಿಯರೂ ಸಂತಸಗೊಂಡಿದ್ದರು. ಮಹಾರಾಷ್ಟ್ರದ ಗುತ್ತಿಗೆದಾರರು ಬಟ್ಟೆ ಪೂರೈಕೆಯ ಗುತ್ತಿಗೆ ಪಡೆದಿದ್ದರು. ಆದರೆ, ವಿವಿಧ ಕಾರಣಗಳಿಂದ ವಿತರಣೆ ವಿಳಂಬವಾಗಿರುವುದು ವಿದ್ಯಾರ್ಥಿಗಳ ನಿರಾಸೆಗೆ ಕಾರಣವಾಗಿದೆ.

ಐದು ವಲಯಗಳಲ್ಲಷ್ಟೇ ವಿತರಣೆ:​ಬೆಳಗಾವಿ: ಇನ್ನೂ ಪೂರೈಕೆಯಾಗದ ಸಮವಸ್ತ್ರ

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಏಳು ವಲಯಗಳಿವೆ. ಇಲ್ಲಿ 1,96,292 ವಿದ್ಯಾರ್ಥಿಗಳಿಗೆ ಎರಡು ಜತೆ ಬಟ್ಟೆ ಸಮವಸ್ತ್ರದ ಬಟ್ಟೆ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ 58,851 ವಿದ್ಯಾರ್ಥಿಗಳಿಗೆ ವಿತರಣೆಯಾಗಿದೆ. ಬೆಳಗಾವಿ ನಗರ ವಲಯದಲ್ಲಿ ಎರಡೂ ಜತೆ ಸಮವಸ್ತ್ರ ನೀಡಲಾಗಿದ್ದರೆ, ಬೆಳಗಾವಿ ಗ್ರಾಮೀಣ ವಲಯದಲ್ಲಿ ಮೊದಲ ಜತೆ ಸಮವಸ್ತ್ರವಷ್ಟೇ ಕೊಡಲಾಗಿದೆ.

ಎಂಟು ವಲಯಗಳನ್ನು ಒಳಗೊಂಡಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2,51,742 ವಿದ್ಯಾರ್ಥಿಗಳಿಗೆ ಸಮವಸ್ತ್ರದ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ 78,816 ಮಕ್ಕಳಿಗೆ ವಿತರಿಸಲಾಗಿದೆ. ನಿಪ್ಪಾಣಿ, ಕಾಗವಾಡ ವಲಯಗಳಲ್ಲಿ ಎರಡೂ ಜತೆ ಸಮವಸ್ತ್ರ ನೀಡಲಾಗಿದ್ದರೆ, ಚಿಕ್ಕೋಡಿ ವಲಯದಲ್ಲಿ ಒಂದು ಜತೆ ಮಾತ್ರ ನೀಡಲಾಗಿದೆ.

ಬೇಗ ವಿತರಿಸಿದರೆ ಅನುಕೂಲವಾಗುತ್ತದೆ: ‘ನಾನು 6ನೇ ತರಗತಿಯಲ್ಲಿ ಓದುತ್ತಿದ್ದೇನೆ. ಈ ಸಲ ಚೂಡಿದಾರ್‌ ಸಮವಸ್ತ್ರ ನೀಡುತ್ತಾರೆ. ಮೊದಲ ದಿನವೇ ಕೊಟ್ಟರೆ ಬೇಗ ಹೊಲಿಸಿಕೊಂಡು, ಹೊಸ ದಿರಿಸಿನಲ್ಲಿ ಶಾಲೆಗೆ ಹೋಗಬೇಕೆಂದು ಯೋಜಿಸಿದ್ದೆ. ಆದರೆ, ತಡವಾಗಿದ್ದು ಬೇಸರ ತರಿಸಿದೆ. ಇನ್ನಾದರೂ ಬೇಗ ವಿತರಿಸಿದರೆ ಅನುಕೂಲವಾಗುತ್ತದೆ’ ಎಂದು ರಾಮದುರ್ಗ ವಲಯದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬರು ಹೇಳಿದರು.


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ