ಬಾಗಲಕೋಟೆ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಸಿಐಡಿ ವಿಚಾರಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿಕೆಯೊಂದನ್ನು ನೀಡಿದ್ದಾರೆ.
ಮುಧೋಳದಲ್ಲಿ ಮಾತನಾಡಿದ ಅವರು ಲೈಂಗಿಕ ಕಿರುಕುಳ ನೀಡಿರುವ ವಿಚಾರದ ಬಗ್ಗೆ ಯಡಿಯೂರಪ್ಪ ಅವರನ್ನು ಇಲಾಖೆ ವಿಚಾರಣೆ ಮಾಡುತ್ತಿದೆ, ತನಿಖೆಯಲ್ಲಿ ಸತ್ಯಾಸತ್ಯತೆ ಏನಿದೆಯೋ ಹೊರಬರಲಿ ಎಂದು ಹೇಳಿದ್ದಾರೆ.
ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಆಗಬಾರದು. ಇದು ಒಳ್ಳೆಯದೂ ಅಲ್ಲ, ಇಲ್ಲಿ ಇಲಾಖೆ ವಿಚಾರಣೆ ಮಾಡುತ್ತೆ ವಿನಃ, ಇಲ್ಲಿ ಸರ್ಕಾರ ಅಥವಾ ಯಾವುದೇ ವ್ಯಕ್ತಿ ವಿಚಾರಣೆ ಮಾಡಲು ಆಗಲ್ಲ ಎಂದು ಹೇಳಿದರು.
ಕೆಲವರ ಹೇಳಿಕೆಗಳನ್ನು ನೋಡಿದ್ದೇನೆ, ಇದನ್ನು ಸಿದ್ದರಾಮಯ್ಯ, ಡಿಕೆಶಿ ಮಾಡಿದ್ದಾರೆ ಎನ್ನುವ ರೀತಿ ಹೇಳಿಕೆಗಳನ್ನು ನೀಡಿ ಜನರನ್ನ ತಪ್ಪು ದಾರಿಗೆ ಎಳೆದು, ದಿಕ್ಕು ಬದಲಿಸುವ ಕೆಲಸ ಮಾಡುತ್ತಿದ್ದಾರೆ ಯಡಿಯೂರಪ್ಪ ವಿಚಾರದಲ್ಲಿ ಕೋರ್ಟ್ ಆದೇಶದಂತೆ ನಡೆದುಕೊಳ್ಳಲಾಗಿದೆ ಇದರಲ್ಲಿ ಯಾವುದೇ ಸೇಡು, ಮತ್ತೊಂದು ನಮ್ಮ ಸರ್ಕಾರದಲ್ಲಿ ಇಲ್ಲ, ಯಾವುದೋ ರಾಜಕೀಯ ಲಾಭ ಪಡೆಯಲು, ಜಾತಿಯನ್ನು ಎತ್ತಿಕಟ್ಟಲು ಹೀಗೆಲ್ಲ ಮಾಡಲಿಲ್ಲ ಎಂದು ಬಿಜೆಪಿ ಮುಖಂಡರ ವಿರುದ್ದ ಪರೋಕ್ಷವಾಗಿ ಶಾಸಕ ತಿಮ್ಮಾಪುರ ಕಿಡಿಕಾರಿದ್ದಾರೆ.