ಬೆಳಗಾವಿ: ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಬಿಮ್ಸ್) ರಕ್ತನಿಧಿ ಕೇಂದ್ರವು ಜಿಲ್ಲೆಯ ವಿವಿಧೆಡೆ ರಕ್ತದಾನ ಶಿಬಿರ ನಡೆಸಿ, ವಾರ್ಷಿಕ 7 ಸಾವಿರಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹಿಸುತ್ತಿದೆ. ಆದರೆ, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಬೇಡಿಕೆಯಂತೆ ರಕ್ತ ಪೂರೈಸಲು ಕೆಲವೊಮ್ಮೆ ಖಾಸಗಿ ರಕ್ತನಿಧಿ ಕೇಂದ್ರಗಳ ನೆರವು ಪಡೆಯುತ್ತಿದೆ.
ಜಿಲ್ಲಾಸ್ಪತ್ರೆಯಲ್ಲಿ ಬೆಳಗಾವಿ ಮಾತ್ರವಲ್ಲದೆ, ಅಕ್ಕಪಕ್ಕದ ಜಿಲ್ಲೆಗಳ ರೋಗಿಗಳು ದಾಖಲಾಗುತ್ತಾರೆ. ಇಲ್ಲಿ ಚಿಕಿತ್ಸೆ ಪಡೆಯುವವರಿಗೆ ಬಿಮ್ಸ್ ರಕ್ತನಿಧಿ ಕೇಂದ್ರದಿಂದ ರಕ್ತ ಪೂರೈಕೆಯಾಗುತ್ತದೆ. ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತವಾಗಿ ಪೂರೈಸಿದರೆ, ಎಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಯೂನಿಟ್‌ಗೆ ₹300 ಶುಲ್ಕ ಪಡೆಯಲಾಗುತ್ತದೆ.
ಈ ಆಸ್ಪತ್ರೆಯಲ್ಲಿ ದಾಖಲಾಗುವವರಿಗೆ ವಾರ್ಷಿಕ ಸರಾಸರಿ 11 ಸಾವಿರ ಯೂನಿಟ್ ರಕ್ತದ ಅಗತ್ಯವಿದೆ. ಈ ಪೈಕಿ ಬಿಮ್ಸ್ ರಕ್ತನಿಧಿ ಕೇಂದ್ರದಲ್ಲಿ 2023-24ರಲ್ಲಿ 7,500 ಯೂನಿಟ್ ಸಂಗ್ರಹವಾಗಿತ್ತು. 2024ರ ಜನವರಿ 1ರಿಂದ ಜೂನ್ 12ರವರೆಗೆ 3,400 ಯೂನಿಟ್ ರಕ್ತ ಸಂಗ್ರಹವಾಗಿದೆ.
ಪ್ರತಿದಿನ 30 ಯೂನಿಟ್ ಬೇಕು
‘ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳಿಗೆ ಪ್ರತಿದಿನ 30ರಿಂದ 35 ಯೂನಿಟ್ ರಕ್ತದ ಅವಶ್ಯಕತೆಯಿದೆ. ಹೆರಿಗೆಯಾಗುವವರು, ನವಜಾತ ಶಿಶುಗಳು, ಅಪಘಾತದಲ್ಲಿ ಗಾಯಗೊಂಡವರು, ಅನಿಮಿಯಾ, ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು, ಡಯಾಲಿಸಿಸ್ ಚಿಕಿತ್ಸೆ, ವಿವಿಧ ಶಸ್ತ್ರಚಿಕಿತ್ಸೆಗೆ ಒಳಪಡುವವರು, ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುವವರಿಗೆ ಅದನ್ನು ಬಳಸಲಾಗುತ್ತಿದೆ.