ಬೆಳಗಾವಿ: ನಗರದಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನೆನಪಿಗೆ ವರ್ಷವಿಡೀ ವಿಶೇಷ ಕಾರ್ಯಕ್ರಮ ಆಯೋಜಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಅದಕ್ಕೆ ಬಜೆಟ್‌ನಲ್ಲಿ ₹2 ಕೋಟಿ ಅನುದಾನ ಮೀಸಲಿಟ್ಟಿದೆ. ಆದರೆ, ಕಾರ್ಯಕ್ರಮದ ಸಿದ್ಧತೆ ಇನ್ನೂ ಆರಂಭಗೊಂಡಿಲ್ಲ.
1924ರ ಡಿಸೆಂಬರ್ 25 ಮತ್ತು 26ರಂದು ಬೆಳಗಾವಿಯಲ್ಲಿ (ಈಗಿನ ವೀರಸೌಧದ ಸ್ಥಳದಲ್ಲಿ) 39ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನವಿದು. ಇದೇ ಡಿಸೆಂಬರ್ 25ಕ್ಕೆ ಆ ಐತಿಹಾಸಿಕ ಗಳಿಗೆಗೆ 100 ವರ್ಷಗಳಾಗಲಿವೆ.
2023ರ ಡಿಸೆಂಬರ್‌ನಲ್ಲಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಅಭಯ ಪಾಟೀಲ, ‘ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಮತ್ತು ಗಾಂಧಿ ಭೇಟಿ ನೀಡಿದ್ದ ಸ್ಥಳಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು’ ಎಂಬ ಖಾಸಗಿ ನಿರ್ಣಯ ಮಂಡಿಸಿದ್ದರು. ಇದನ್ನು ಅಂಗೀಕರಿಸಿದ್ದ ಸರ್ಕಾರ ₹2 ಕೋಟಿ ಅನುದಾನ ಮೀಸಲಿಟ್ಟಿತ್ತು. ಆದರೆ, ಈವರೆಗೆ ಯಾವುದೇ ಕಾರ್ಯಕ್ರಮ ನಡೆದಿಲ್ಲ.