ಉಪ್ಪಿನಬೆಟಗೇರಿ: ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮದ ರೈತಾಪಿ ಜನರು ಮುಂಗಾರು ಬಿತ್ತನೆಗೆ ಸಿದ್ದತೆ ಮಾಡ ತೊಡಗಿದ್ದು, ಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಮುಂದಾಗಿದ್ದಾರೆ. ಕಳೆದೊಂದು ವಾರ ಸುರಿದ ಮಳೆಗೆ ಕೃಷಿ ಭೂಮಿ ಹಸಿಯಾಗಿ ಈಗ ಹದಕ್ಕೆ ಬಂದಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿವೆ.
ಕಳೆದ ಹತ್ತುದಿನಗಳ ಹಿಂದೆ ಅಡ್ಡ ಮಳೆ, ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದ ಕಾರಣ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಈಗ ರೈತಾಪಿ ಜನ ರಾಸಾಯನಿಕ ಗೊಬ್ಬರ ಖರೀದಿಸಲು ಕೃಷಿ ಪತ್ತಿನ ಸಹಕಾರ ಸಂಘ, ಅಗ್ರೋ ಕೇಂದ್ರ, ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಖರೀದಿಸುತ್ತಿದ್ದಾರೆ.
ಹದಿನೈದು ದಿನದ ಹಿಂದೆ ಉಪ್ಪಿನಬೆಟಗೇರಿ ಹಾಗೂ ಸುತ್ತಲಿನ ಗ್ರಾಮದ ರೈತರು ಬೀಜ, ಗೊಬ್ಬರ ಖರೀದಿಸಿ ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ಇನ್ನೂ ಕೆಲ ರೈತರು ಮುಂಗಾರು ಮಳೆ ಸುರಿದ ಮೇಲೆ ಖರೀದಿಸಿದರಾಯ್ತು ಎಂದು ಬಿಟ್ಟಿದ್ದರು. ಈಗ ಉತ್ತಮ ಮಳೆಯಾಗಿ ಬಿತ್ತಲು ಹದ ಬಂದಿರೊದ್ರಿಂದ ರೈತರು ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಖರೀದಿಸುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಸೋಯಾಬೀನ, ಶೇಂಗಾ ಮೊದಲಾದ ಬೆಳೆಗಳ ಬಿತ್ತನೆ ಮಾಡಲು ಮುಂದಾಗಿದ್ದೇವೆ. ರಾಸಾಯನಿಕ ಗೊಬ್ಬರದ ಸಲುವಾಗಿ ಆದಾರ ಕಾರ್ಡ ಸಮೇತ ತೆರಳಿ ಸರತಿ ಸಾಲಲ್ಲಿ ನಿಂತು ಖರೀದಿ ಮಾಡಿದ್ದೇವೆ. 50 ಕೆ.ಜಿ ಪ್ಯಾಕೇಟ್ ಡಿಎಪಿ ಗೊಬ್ಬರಕ್ಕೆ ₹1350 ಇದೆ. ಎರಡು ಪ್ಯಾಕೇಟ್ ಗೊಬ್ಬರಕ್ಕೆ ₹ 225 ರ ನ್ಯಾನೋ ಯೂರಿಯಾದ ಔಷಧಿ ಡಬ್ಬಿ ಮತ್ತು ಮೂರು, ನಾಲ್ಕು ಪ್ಯಾಕೇಟ್‌ಗೆ ₹ 600 ದರದ ಪೋಟ್ಯಾಶ್ ಗೊಬ್ಬರದ ಪ್ಯಾಕೇಟ್ ಹೆಚ್ಚುವರಿಯಾಗಿ ಖರೀದಿಸಬೇಕೆಂದು ನಿಯಮ ಮಾಡಿದ್ದಾರೆ. ಮೊದಲೇ ರಾಸಾಯನಿಕ ಗೊಬ್ಬರ ಸಿಗುವುದು ಕಷ್ಟವಾಗಿದೆ. ಆದ್ದರಿಂದ ಸೋಸಾಯಿಟಿ ನಿಯಮದಂತೆ ಖರೀದಿಸುವುದು ಅನೀವಾರ್ಯವಾಗಿದೆ ಎಂದು ರೈತ ಬಸವರಾಜ ಬಿಸ್ನಾಳ ತಿಳಿಸಿದರು.