ಹುಬ್ಬಳ್ಳಿ, ಜೂನ್ 11: ಕರ್ನಾಟಕದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾಗಿ ಒಂದು ವರ್ಷ (ಜೂನ್ 11) ಪೂರ್ಣಗೊಂಡಿದೆ. ಯೋಜನೆಯಿಂದ ರಾಜ್ಯದ ಮಹಿಳೆಯರು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಅವಧಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್‌ಗಳಲ್ಲಿ 52.12 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಶೂನ್ಯ ಟಿಕೆಟ್ ಮೊತ್ತ 1352.68 ಕೋಟಿ ರೂ. ಗಳಾಗಿವೆ ಎಂದು NWKRTC ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆಯು 2023ರ ಜೂನ್ 11ರಂದು ಜಾರಿಗೆ ಬಂದಿರುತ್ತದೆ. ರಾಜ್ಯದ ರಹವಾಸಿಯಾಗಿರುವ ಮಹಿಳೆಯರು (ಲಿಂಗತ್ವ ಅಲ್ಪಸಂಖ್ಯಾತರೂ ಸೇರಿ) ಹಾಗೂ ವಿದ್ಯಾರ್ಥಿನಿಯರು ಸಂಸ್ಥೆಯ ನಗರ, ಉಪನಗರ, ಸಾಮಾನ್ಯ, ವೇಗದೂತ ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಹಾಗೂ ಆಯ್ದ ಅಂತರ ರಾಜ್ಯ ವೇಗದೂತ ಸಾರಿಗೆಗಳಲ್ಲಿ ರಾಜ್ಯದ ಗಡಿಯವರೆಗೆ ಉಚಿತವಾಗಿ ಪ್ರಯಾಣಿಸುವ ಯೋಜನೆ ಇದಾಗಿದೆ.
ಈ ಭಾಗದಲ್ಲಿ ಸಾರಿಗೆ ನಿಗಮದ ಬಸ್‌ಗಳಲ್ಲಿ ನಿತ್ಯ ಸರಾಸರಿ 14.28 ಲಕ್ಷ ಮಹಿಳಾ ಪ್ರಯಾಣಿಕರು ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.