ಬೆಳಗಾವಿ: ಸಂಸದ ಜಗದೀಶ ಶೆಟ್ಟರ್ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಜನ ‘ಮನೆಯ ಸದಸ್ಯ’ ಎಂದು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳ ಮೂಲಕವೇ ಅವರು ಈ ಮಾತಿಗೆ ‘ಠಸ್ಸೆ’ ಹೊಡೆಯಬೇಕಿದೆ.
‘ಬೆಳಗಾವಿಯಲ್ಲಿ ಶೆಟ್ಟರ್‌ಗೆ ಅಡ್ರೆಸ್ಸೇ ಇಲ್ಲ’ ಎಂಬ ಆರೋಪಕ್ಕೆ, ‘ಬೀಗರ ಮನೆಗೆ ಬಂದಿದ್ದೀರಿ ಶೆಟ್ಟರೇ, ಉಂಡು ವಾಪಸ್ ಹೋಗಿ’ ಎಂಬ ಮೂದಲಿಕೆಗೆ, ‘ಬೆಳಗಾವಿಗೆ ಮೋಸ ಮಾಡಿದವರಿಗೆ ಮತ ಕೊಡಬೇಕೆ?’
ಎಂಬ ಪ್ರಶ್ನೆಗಳಿಗೆ ಮತದಾರ ಈಗ ಉತ್ತರ ಕೊಟ್ಟಿದ್ದಾನೆ. ಶೆಟ್ಟರ್ ರಾಜಕೀಯ ಹೆಜ್ಜೆಯೊಂದನ್ನು ಜಿಲ್ಲೆಯ ಇತಿಹಾಸದ ಪುಟದಲ್ಲೇ ಮೂಡಿಸಿದ್ದಾನೆ. ಈ ಹೆಜ್ಜೆ ಗುರುತು ಕೇವಲ ಭರವಸೆಯ ಹೊಳೆಯಲ್ಲಿ ಅಳಿಸದಂತೆ ನೋಡಿಕೊಳ್ಳುವುದು ಶೆಟ್ಟರ್ ಮುಂದಿರುವ ಮೊದಲ ಸವಾಲು.
‘ಸದ್ಯಕ್ಕೆ ಬಾಡಿಗೆ ಮನೆ ಮಾಡಿದ್ದೇನೆ. ಮತದಾರರ ಪಟ್ಟಿಯಲ್ಲೂ ಸೇರಿದ್ದೇನೆ. ಶೀಘ್ರ ಸ್ವಂತ ಮನೆ ಖರೀದಿಸುತ್ತೇನೆ’ ಎಂದು ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ. ಇವೆಲ್ಲ ಭೌತಿಕ ಅಂಶಗಳು ಮಾತ್ರ.
‘ಹೊರಗಿನವನಲ್ಲ’ ಎಂಬ ಮಾತಿನಬೀಜವನ್ನು ಜನರ ಮನದಲ್ಲಿ ಬಿತ್ತಬೇಕಾದುದು ಮುಖ್ಯ. ಅದು ಸಾಧ್ಯವಾಗುವುದು ‘ಜನಕಲ್ಯಾಣ’ ಕೆಲಸಗಳಿಂದ ಮಾತ್ರ ಎಂಬುದು ಮತದಾರರ ಬಯಕೆ.
‘ಮುಖ್ಯಮಂತ್ರಿಯಾಗಿ, ವಿವಿಧ ಖಾತೆಗಳ ಸಚಿವರಾಗಿ, ಸ್ಪೀಕರ್ ಆಗಿ ಕೆಲಸ ಮಾಡಿದ್ದಾರೆ. ಈಗಲೂ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ’ ಎಂಬ ಆರೋಪವನ್ನೂ ಶೆಟ್ಟರ್ ಅವರು ಗಂಭೀರವಾಗಿ ಪರಿಗಣಿಸಬೇಕಿದೆ ಎಂಬುದು ಹಿರಿಯರ ಅನಿಸಿಕೆ.
ಒಳಸುಳಿಗೆ ಸಿಲುಕದಿರಲಿ: ಶೆಟ್ಟರ್ ಅವರ 40 ವರ್ಷಗಳ ರಾಜಕಾರಣವೇ ಬೇರೆ; ಬೆಳಗಾವಿ ಜಿಲ್ಲೆಯ ರಾಜಕೀಯ ಬಣ್ಣವೇ ಬೇರೆ. ಇಲ್ಲಿ ಪಾಸಾದವರು ಎಲ್ಲಿಯಾದರೂ ಪಾರಾಗುತ್ತಾರೆ ಎಂಬಷ್ಟರ ಮಟ್ಟಿಗೆ ಜಿಲ್ಲೆಯ ರಾಜಕಾರಣ ಒಳಸುಳಿಗಳನ್ನು ಒಳಗೊಂಡಿದೆ. ಜಿಲ್ಲೆಯ ಜತೆಗೆ 30 ವರ್ಷಗಳ ಒಡನಾಟ ಹೊಂದಿದ್ದೇನೆ, ಎರಡು ಬಾರಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದು ನೂತನ ಸಂಸದ ಹೇಳಿಕೊಂಡಿದ್ದಾರೆ. ಆದರೆ, ಈಗ ಜಿಲ್ಲೆಯಲ್ಲೇ ‘ರಾಜಕಾರಣ’ ಮಾಡಬೇಕಾಗಿದೆ ಎಂಬುದು ಸವಾಲು.
‘ಪ್ರಭಾವಿ ರಾಜಕಾರಣಿಗಳ, ಪ್ರಭಾವಿ ಕುಟುಂಬದ ‘ಪ್ರಭಾವ’ಕ್ಕೆ ಸಿಕ್ಕಿಕೊಳ್ಳದಂತೆ ಇರುವುದು ಮುಖ್ಯ. ದಿವಂಗತ ಸುರೇಶ ಅಂಗಡಿ ಅವರು ಕೂಡ ಯಾವುದೇ ಕುಟುಂಬದ ‘ಬಿಡೆ’ ಇಟ್ಟುಕೊಳ್ಳದಂತೆ ಎಚ್ಚರಿಕೆಯ ರಾಜಕಾರಣ ಮಾಡಿದ್ದರು. ಇಂಥದ್ದೇ ದೃಢತೆಯನ್ನು ಶೆಟ್ಟರ್ ಅವರಿಂದಲೂ ಬಯಸಿದ್ದೇವೆ’ ಎಂಬುದು ಬಿಜೆಪಿ ಕಾರ್ಯಕರ್ತರ ಹೇಳಿಕೆ.
ಹುಬ್ಬಳ್ಳಿ ವಿಧಾನಸಭೆ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿರುವ ಶೆಟ್ಟರ್ ಇದೇ ಮೊದಲ ಬಾರಿಗೆ ಸಂಸತ್ ಮೆಟ್ಟಿಲು ಹತ್ತಿದ್ದಾರೆ. ಹಿರಿಯ ರಾಜಕಾರಣಿಗೂ ಇದು ಹೊಸ ಅನುಭವ. ಅವರ ಅನುಭವ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ ಎಂಬ ನಂಬಿಕೆಯಿಂದ ಮತದಾರ ಗೆಲುವು ನೀಡಿದ್ದಾನೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಿ ಜನರಿಗೆ ಸರಿಯಾಗಿ ಸಿಗಲಿಲ್ಲ, ಅಧಿಕಾರಿಗಳ ಸಭೆ ನಡೆಸಿಲ್ಲ, ಜ್ವಲಂತ ಸಮಸ್ಯೆಗಳಿಗೆ ಕಿವಿಗೊಡಲಿಲ್ಲ… ಎಂಬೆಲ್ಲ ಆರೋಪಗಳು ಅವರ ಮೇಲಿವೆ. ಇವೆಲ್ಲ ಮುಂದೆಯೂ ಜೀವಂತ ಉಳಿಯದಂತೆ ನೋಡಿಕೊಳ್ಳುವ ಸವಾಲೂ ಅವರಿಗೆ ಎದುರಾಗಿದೆ.
‘.