ಕೊಲ್ಕತ್ತ: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಜಿದ್ದಾಜಿದ್ದಿ ಎದುರಿಸಿಕೊಂಡೇ ಬಂದಿರುವ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಮತ್ತೊಮ್ಮೆ ತನ್ನ ಬಲವನ್ನು ಸಾಬೀತುಪಡಿಸಿದೆ. ಬಂಗಾಳದಲ್ಲಿ ದೀದೀ ಮುಂದೆ ಯಾರದ್ದೂ ನಡೆಯಲ್ಲ ಅನ್ನೋದನ್ನು ಲೋಕಸಭಾ ಚುನಾವಣೆಯಲ್ಲಿ ನಿರೂಪಿಸಿದ್ದಾರೆ.
ಬಿಜೆಪಿಯ ಶತಪ್ರಯತ್ನಗಳಾಚೆಗೂ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ. ಬಂಗಾಳದ 42 ಸೀಟ್ಗಳಲ್ಲಿ 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಟಿಎಂಸಿ ಮುನ್ನಡೆ ಕಾಯ್ದುಕೊಂಡಿದೆ.
ಬಿಜೆಪಿಯ 8 ಸ್ಥಾನ ಕಸಿದುಕೊಳ್ಳಲಿರುವ ಎಂಟಿಸಿ
ಬಂಗಾಳದಲ್ಲಿ ಲೋಕಸಭಾ ಚುನಾವಣೆಯ ಮತಗಳ ಎಣಿಕೆ ಇನ್ನೂ ನಡೆಯುತ್ತಿದೆ. ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ರಾಜ್ಯದ ಮೇಲಿನ ತನ್ನ ದೃಢವಾದ ಹಿಡಿತವನ್ನು ಉಳಿಸಿಕೊಂಡಿದೆ. ಟಿಎಂಸಿ ಬಿಜೆಪಿಯಿಂದ ಕನಿಷ್ಠ 8 ಸ್ಥಾನಗಳನ್ನು ಕಸಿದುಕೊಳ್ಳುವ ಹಾದಿಯಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಅಸ್ಥಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ. ಬಂಗಾಳಿಗರು ದೀದೀಗೆ ಮಣೆ ಹಾಕಿದ್ದು, ಪ್ರಧಾನಿ ಮೋದಿಯನ್ನು ತಿರಸ್ಕರಿಸಿದ್ದಾರೆ.
ಸುಳ್ಳಾದ ಎಕ್ಸಿಟ್ ಪೋಲ್ ಭವಿಷ್ಯ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುತ್ತೆ ಎಂದು ಹೇಳಿದ್ದ ಎಕ್ಸಿಟ್ ಪೋಲ್ ಭವಿಷ್ಯವನ್ನು ಟಿಎಂಸಿ ಸುಳ್ಳಾಗಿಸಿದೆ. ಟಿಎಂಸಿ ಇನ್ನೂ ಒಂದು ಹೆಜ್ಜೆ ಮುಂದೋಗಿ ಬಿಜೆಪಿಯ 8 ಸ್ಥಾನಗಳನ್ನು ಕಸಿದುಕೊಂಡಿದೆ. ಬಿಜೆಪಿ ಸಂಖ್ಯಾಬಲ ಅರ್ಧಕ್ಕೆ ಕುಸಿದಿದೆ.
ಬಿಜೆಪಿ ನಾಯಕರಿಗೆ ಮುಖಭಂಗ
ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥ ಸುಕಾಂತ ಮಜುಂದಾರ್ ಮತ್ತು ಕೇಂದ್ರ ಸಚಿವ ನಿಶಿತ್ ಪ್ರಮಾಣಿಕ್ ಅವರು ಕ್ರಮವಾಗಿ ಸ್ಪರ್ಧಿಸಿದ್ದ ಬಾಲುರ್‌ಘಾಟ್ ಮತ್ತು ಕೂಚ್‌ಬೆಹಾರ್‌ನಂತಹ ನಿರ್ಣಾಯಕ ಸ್ಥಾನಗಳಲ್ಲಿ ಬಿಜೆಪಿ ಹಿಂದುಳಿದಿದೆ. ಎರಡು ಬಾರಿ ಗೆದ್ದಿದ್ದ ತನ್ನ ಭದ್ರಕೋಟೆಯಾದ ಅಸನ್ಸೋಲ್‌ನಲ್ಲಿಯೂ ಪಕ್ಷ ಹಿಂದುಳಿದಿದೆ.
ಗೆಲುವಿಗೆ ಕಾರಣ ಏನಿರಬಹುದು?
ಮಮತಾ ಬ್ಯಾನರ್ಜಿಯವರ ಸರ್ಕಾರವು ರಾಜ್ಯದಲ್ಲಿ ಸುಮಾರು 10 ಮಹಿಳಾ ಕೇಂದ್ರಿತ ನಗದು ಯೋಜನೆಗಳನ್ನು ನೀಡುತ್ತಿದೆ. ಲಕ್ಷ್ಮೀ ಭಂಡಾರ್, ಕನ್ಯಾಶ್ರೀ ಮತ್ತು ರೂಪಶ್ರೀ ಸೇರಿದಂತೆ ಹನ್ನೆರಡು ನಗದು ಯೋಜನೆಗಳನ್ನು ನಡೆಸುತ್ತಿದೆ. ಈ ಎಲ್ಲಾ ಯೋಜನೆಗಳ ಅಡಿಯಲ್ಲಿ ಮಹಿಳೆಯರಿಗೆ ಸರ್ಕಾರದಿಂದ ಆರ್ಥಿಕ ನೆರವು ಸಿಗುತ್ತದೆ.