ಲಕ್ನೋ: ಅಕ್ರಮವಾಗಿ ಮಾರುತ್ತಿದ್ದ ವಿಷಕಾರಿ ಮದ್ಯ ಸೇವಿಸಿ ಆರು ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್‍ನ ಅಮಿಲಿಯಾ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸ್ಥಳೀಯರು ಹೇಳುವ ಪ್ರಕಾರ, ಸಾವನ್ನಪ್ಪಿದ ಎಲ್ಲರೂ ಸ್ಥಳೀಯವಾಗಿ ಅಂಗಡಿಯಲ್ಲಿ ಸಿಗುವ ಕಂಟ್ರಿ ಸರಾಯಿಯನ್ನು ಕುಡಿದ್ದಾರೆ. ಆ ಬಳಿಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಜೊತೆಗೆ 15 ಮಂದಿ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಯಾಗರಾಜ್ ಜಿಲ್ಲೆಯ ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿ ಅವರು ಪ್ರಕರಣದ ಬಗ್ಗೆ ಮಾತನಾಡಿದ್ದು, ವಿಷಕಾರಿ ಮದ್ಯ ಸೇವಿಸಿ ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಪಡೆದು ನಮ್ಮ ಅಧಿಕಾರಿಗಳು ಅಮಿಲಿಯಾ ಗ್ರಾಮಕ್ಕೆ ತೆರಳಿದ್ದಾರೆ. ಅವರ ಸಾವಿಗೆ ಕಾರಣವೇನು ಎಂದು ಮರಣೋತ್ತರ ವರದಿ ಬಂದ ಮೇಲೆ ತಿಳಿಯಲಿದೆ. ಜೊತೆಗೆ ಅಕ್ರಮ ಮದ್ಯದ ಸ್ಯಾಂಪಲ್ ಅನ್ನು ಕೂಡ ನಾವು ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸ್ಥಳೀಯ ನಿವಾಸಿಗಳು, ಈ ರೀತಿಯ ಅಕ್ರಮ ಮದ್ಯದಂಗಡಿ ನಡೆಸುತ್ತಿರುವ ಮಾಲೀಕನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಆತನ ವಿರುದ್ಧ ನಕಲಿ ಮದ್ಯ ಮಾರಾಟ, ಕಳ್ಳಸಾಗಣೆಗೆ ಸೇರಿದಂತೆ ಹಲವಾರು ಕೇಸ್‍ಗಳು ದಾಖಲಾಗಿವೆ. ಆದರೂ ಆತ ಇದೇ ಪ್ರದೇಶದಲ್ಲಿ ಮೂರು ಮದ್ಯದಂಗಡಿಗಳನ್ನು ನಡೆಸುತ್ತಿದ್ದಾನೆ ಎಂದು ದೂರಿದ್ದಾರೆ.
Laxmi News 24×7