ಬೆಳಗಾವಿ: ಒಂದು ಕಾಲಕ್ಕೆ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ನೆರವಾಗಿದ್ದ, ಅಕ್ಕಪಕ್ಕದ ಜಮೀನುಗಳ ಕೊಳವೆಬಾವಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿದ ಇಲ್ಲಿನ ಅನಗೋಳದ ಅಂಬೇಡ್ಕರ್ ಕೆರೆ ಈಗ ಬರಿದಾಗಿದ್ದು, ಆಟದ ಮೈದಾನವಾಗಿ ಮಾರ್ಪಟ್ಟಿದೆ. ಇದನ್ನು ಮಾದರಿಯಾಗಿ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ನನೆಗುದಿಗೆ ಬಿದ್ದಿದೆ.
9 ಎಕರೆ ಪರಿಸರದಲ್ಲಿ ಹರಡಿಕೊಂಡಿರುವ ಕೆರೆಯಲ್ಲಿ ಈ ಹಿಂದೆ ಬೇಸಿಗೆಯವರೆಗೂ ನೀರು ಸಂಗ್ರಹವಿರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಚಳಿಗಾಲದ ಹೊತ್ತಿಗೆ ಕೆರೆಯೊಡಲು ಖಾಲಿಯಾಗುತ್ತಿದೆ.
ಹಾಗಾಗಿ ನಿತ್ಯ ಸಂಜೆಯಾಗುತ್ತಿದ್ದಂತೆ ಇಲ್ಲಿಗೆ ಲಗ್ಗೆ ಇಡುತ್ತಿರುವ ಯುವಕರು ಮತ್ತು ಮಕ್ಕಳು, ಕ್ರಿಕೆಟ್, ಫುಟ್‌ಬಾಲ್ ಆಟವಾಡಲು ಕೆರೆ ಬಳಸಿಕೊಳ್ಳುತ್ತಿದ್ದಾರೆ.
ಜಲಮೂಲಗಳ ಅತಿಕ್ರಮಣ: ‘ದಶಕದ ಹಿಂದೆ ಅನಗೋಳದಲ್ಲಿ ಉತ್ತಮ ಮಳೆಯಾದರೆ, ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿತ್ತು. ಮುಖ್ಯರಸ್ತೆಗೆ ಹೊಂದಿಕೊಂಡ ಕೆರೆ ಜೀವಜಲದಿಂದ ಮೈದುಂಬಿಕೊಂಡು ಕಂಗೊಳಿಸುತ್ತಿತ್ತು. ಆದರೆ, ಈಗ ಜಲಮೂಲಗಳ ಅತಿಕ್ರಮಣವಾಗಿದೆ. ಕೆರೆಗೆ ನೀರು ಹರಿದುಬರುವ ಮಾರ್ಗದಲ್ಲಿ ಮನೆಗಳು ತಲೆ ಎತ್ತಿವೆ. ಇದರಿಂದಾಗಿ ಕೆರೆ ತುಂಬುತ್ತಿಲ್ಲ. ಈ ವರ್ಷ ವರುಣ ಕೈಕೊಟ್ಟ ಪರಿಣಾಮ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ’ ಎಂದು ಸ್ಥಳೀಯರು ಆರೋಪಿಸಿದರು.
ಶುಚಿತ್ವ ಮಾಯ: ‘ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕಾಗಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಆದರೆ, ನಿರೀಕ್ಷೆಯಂತೆ ಮೂಲಸೌಕರ್ಯವಿಲ್ಲ. ಶುಚಿತ್ವವೂ ಮಾಯವಾಗಿದೆ. ಗಿಡಗಂಟಿಗಳು ಹೇರಳವಾಗಿ ಬೆಳೆದಿದ್ದು, ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ’ ಎಂದು ಸ್ಥಳೀಯ ರವಿ ಕೊಂಕಣಿ ಬೇಸರಿಸಿದರು.