ಬೆಂಗಳೂರು, ಮೇ 29: ಲೋಕಸಭಾ ಚುನಾವಣೆ ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದಿದ್ದು, ಸದ್ಯ ರಾಜಕೀಯ ನಾಯಕರು ಜೂನ್ 4 ರ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಇತ್ತ ಕೈ ಪಾಳಯದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬದಲಾವಣೆ ವಿಚಾರ ಮುನ್ನಲೆ ಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಹುದ್ದೆಗೆ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹುದ್ದೆಗೆ ಡಿ.ಕೆ.ಶಿವಕುಮಾರ್ ಅವರ ನೇಮಕವನ್ನು ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಿದ್ದರು, ಆ ವೇಳೆ ಲೋಕಸಭಾ ಚುನಾವಣೆಯ ತನಕ ಡಿ.ಕೆ.ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಕಾಂಗ್ರೆಸ್ ವರಿಷ್ಠರು ಹೇಳಿದ್ರು, ಇದೀಗ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕೆಲ ದಿನಗಳ ಮಾತ್ರ ಬಾಕಿ ಉಳಿದಿದ್ದು, ಫಲಿತಾಂಶದ ಬಳಿಕ ಕೆಪಿಸಿಸಿ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಲೋಕಸಭಾ ಚುನಾವಣೆಯ ಫಲಿತಾಂಶ ಬರಲು ದಿನಗಣನೆ ಆರಂಭವಾಗುತ್ತಿದ್ದಂತೆಯೇ ಹೈಕಮಾಂಡ್ ವರಿಷ್ಟರಾಡಿದ್ದ ಮಾತು ಮುನ್ನೆಲೆಗೆ ಬಂದಿದೆ. ಕೆಪಿಸಿಸಿ ಅಧ್ಯಕ್ಷರ ಅವಧಿ ಇದೀಗ ಮುಕ್ತಾಯವಾಗಿದ್ದು, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಕೆಳಗಿಳಿದರೆ ಆ ಜಾಗಕ್ಕೆ ಬರುವವರು ಯಾರು ಎಂಬ ಪ್ರಶ್ನೆ ಮೇಲೆದ್ದಿದ್ದು, ಅಧ್ಯಕ್ಷರ ಸ್ಥಾನಕ್ಕೆ ಕೈ ಪಾಳಯದಲ್ಲಿ ಹಲವು ಹೆಸರುಗಳು ಕೇಳಿ ಬರುತ್ತಿವೆ.
ಕೈ ಪಾಳಯದಲ್ಲಿ ಡಿ ಕೆ ಶಿವಕುಮಾರ್ ಅವರ ಜಾಗಕ್ಕೆ ಬರುವವರು ಯಾರು ಎಂಬ ಪ್ರಶ್ನೆ ಕೇಳಿಬರುತ್ತಿದ್ದು, ಡಿ ಕೆ ಶಿವಕುಮಾರ್ ಅವರ ಜಾಗಕ್ಕೆ ಸಹೋದರ ಡಿ ಕೆ ಸುರೇಶ್ ಅವರ ಹೆಸರು ಮುನ್ನಲೆ ಬಂದಿದೆ. ಈ ರೀತಿ ಡಿ.ಕೆ.ಸುರೇಶ್ ಹೆಸರು ಮುಂಚೂಣಿಗೆ ಬರಲು ಡಿ ಕೆ ಶಿವಕುಮಾರ್ ಅವರ ಲೆಕ್ಕಾಚಾರವೇ ಕಾರಣ ಎಂಬುದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ತಾವು ತೆರವು ಮಾಡುವ ಜಾಗಕ್ಕೆ ತಮ್ಮ ಸಹೋದರ ಡಿ.ಕೆ.ಸುರೇಶ್ ಬಂದು ಕುಳಿತರೆ ಎಂದಿನಂತೆಯೇ ಪಕ್ಷದ ಮೇಲೆ ತಮಗೆ ಹಿಡಿತ ಇರುತ್ತದೆ ಎಂಬುದು ಡಿ ಕೆ ಶಿವಕುಮಾರ್ ಅವರ ಲೆಕ್ಕಾಚಾರವಾಗಿದೆ.
ಇನ್ನೂ ಡಿ ಕೆ ಸುರೇಶ್ ಮಾತ್ರವಲ್ಲದೇ ಲಿಂಗಾಯತ ನಾಯಕರೊಬ್ಬರು ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಡಿಕೆ ಶಿವಕುಮಾರ್ ಇಳಿದರೇ ಆ ಜಾಗಕ್ಕೆ ಲಿಂಗಾಯತ ನಾಯಕರೊಬ್ಬರನ್ನು ತರಬೇಕು ಅಂತ ಸಿದ್ಧರಾಮಯ್ಯ ಅವರು ಸೇರಿದಂತೆ ಅವರ ಬೆಂಬಲಿಗರು ಚಿಂತಿಸಿದ್ದಾರೆ ಎನ್ನಲಾಗಿದೆ. ಅದರಂತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರ ಹೆಸರು ಮುನ್ನಲೆಗೆ ಬಂದಿದೆ. ಅಲ್ಲದೇ ಹಿರಿತನವನ್ನು ಮಾನದಂಡವಾಗಿಟ್ಟುಕೊಂಡು ಎಸ್.ಆರ್.ಪಾಟೀಲರ ಹೆಸರು ಕೇಳಿ ಬಂದರು, ಈ ಬಗ್ಗೆ ಕೈ ಪಾಳಯದಲ್ಲೇ ಬೆಂಬಲ ಕೇಳಿ ಬರುತ್ತಿಲ್ಲ.
ಇತ್ತ ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ದಲಿತ ನಾಯಕರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಹೆಸರು ಪ್ರಸ್ತಾಪವಾಗುತ್ತಿದ್ದರೂ ಈ ಇಬ್ಬರು ನಾಯಕರಿಗೆ ಆಸಕ್ತಿ ಇಲ್ಲ. ಏಕೆಂದರೇ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕರ್ನಾಟಕದಲ್ಲಿ ಹೆಚ್ಚುವರಿ ಡಿಸಿಎಂಗಳು ಬೇಕು ಎಂಬ ಕೂಗು ಶುರುವಾಗುತ್ತದೆ. ಈ ಮಧ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಿಂತ ಡಿಸಿಎಂ ಹುದ್ದೆಯನ್ನ ಅಲಂಕಾರಿಸಬೇಕು ಎಂಬುದು ಈ ನಾಯಕರ ಯೋಜನೆಯಾಗಿದೆ ಎಂದು ಹೇಳಲಾಗಿದೆ.
ಪರಿಶಿಷ್ಟ ಪಂಗಡದ ನಾಯಕ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಪಟ್ಟ ಅಲಂಕರಿಸಲು ರೆಡಿಯಾಗಿದ್ದಾರೆ ಎನ್ನಲಾಗಿದೆ. ಇತ್ತ ಕೆ ಎನ್ ರಾಜಣ್ಣ ಅವರು ಕೆಪಿಸಿಸಿ ಅಧ್ಯಕ್ಷರಾದರೇ ಸಿದ್ದರಾಮಯ್ಯ ಅವರು ರಾಜಣ್ಣ ಅವರ ಬೆನ್ನಿಗೆ ನಿಲ್ಲುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ನಾಲಿ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅನಿವಾರ್ಯವಾದರೇ ಅಳೆದು ತೂಗಿ ಹೈಕಮಾಂಡ್ ಯಾರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟುತ್ತದೆ ಎಂಬುದನ್ನ ಕಾದು ನೋಡ್ಬೇಕಾಗಿದೆ.