ಬೆಳಗಾವಿ: ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಆತಂಕಗೊಂಡಿದ್ದ ಜಿಲ್ಲೆಯ ರೈತರು, ಈ ಬಾರಿ ಮುಂಗಾರು ಪೂರ್ವ ಮಳೆ ಕೈಹಿಡಿದಿದ್ದರಿಂದ ಸಂತಸಗೊಂಡಿದ್ದಾರೆ. ಕಳೆದೊಂದು ವಾರದಿಂದೀಚೆಗೆ ಆಗಾಗ ಸುರಿಯುತ್ತಿರುವ ಮಳೆ, ಬಿತ್ತನೆ ಪೂರ್ವ ಚಟುವಟಿಕೆಗೆ ವೇಗ ನೀಡಿದೆ.
ಬಿತ್ತನೆಗಾಗಿ ಭೂಮಿ ಹದಗೊಳಿಸುತ್ತಿರುವ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ರಾಮದುರ್ಗ, ಖಾನಾಪುರ, ಮೂಡಲಗಿ ತಾಲ್ಲೂಕುಗಳಲ್ಲಿ ಈಗಾಗಲೇ ಬಿತ್ತನೆ ಬೀಜಗಳ ವಿತರಣೆ ಆರಂಭವಾಗಿದೆ. ಆದರೆ, ಬಿತ್ತನೆ ಬೀಜಗಳ ದರ ಹೆಚ್ಚಿರುವುದು ಕೃಷಿಕರಿಗೆ ಸಂಕಷ್ಟ ತಂದೊಡ್ಡಿದೆ.
ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಗುರಿ ಹೊಂದಿದ್ದ 7.11 ಲಕ್ಷ ಹೆಕ್ಟೇರ್ ಪೈಕಿ, 6.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ಬಾರಿ 7.40 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದೆ.