Breaking News

ಪತಿ ನೆನಪಿಗಾಗಿ ಗ್ರಂಥಾಲಯ ಅಭಿವೃದ್ಧಿ

Spread the love

ಬೆಳಗಾವಿ: 2022ರ ಆಗಸ್ಟ್‌ನಲ್ಲಿ ನಿಧನರಾದ ಪತಿ ನೆನಪಿಗಾಗಿ ಪತ್ನಿಯೊಬ್ಬರು, ಇಲ್ಲಿನ ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆಯಲ್ಲಿ ₹1.13 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಅಭಿವೃದ್ಧಿಪಡಿಸಿದ್ದಾರೆ.

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ಥಾನಿಕ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ.ವಿದ್ಯಾ ಅರಳಿಕಟ್ಟಿ ಇಂಥದ್ದೊಂದು ಕೆಲಸ ಮಾಡಿದವರು.

 

174 ವರ್ಷಗಳ ಹಿಂದೆ ಸ್ಥಾಪನೆಯಾದ ಈ ಪ್ರೌಢಶಾಲೆಯಲ್ಲಿ ಗ್ರಂಥಾಲಯಕ್ಕೆ ಪ‍್ರತ್ಯೇಕ ಕೊಠಡಿ, ಪರಿಕರ ಮತ್ತು ಆಸನ ವ್ಯವಸ್ಥೆ ಇರಲಿಲ್ಲ. ಒಂದಿಷ್ಟು ಹಳೆಯ ಪುಸ್ತಕಗಳನ್ನು ಹೊರತುಪಡಿಸಿದರೆ, ಗ್ರಂಥಾಲಯ ಇದ್ದೂ ಇಲ್ಲದಂತಿತ್ತು. ಇದರಿಂದಾಗಿ ಇಲ್ಲಿ ಓದುತ್ತಿರುವ ಕನ್ನಡ, ಮರಾಠಿ ಮತ್ತು ಉರ್ದು ಮಾಧ್ಯಮಗಳ 583 ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತೊಂದರೆಯಾಗಿತ್ತು.

ಕಳೆದ ವರ್ಷ ಶಾಲೆಗೆ ಬಂದಿದ್ದ ವಿದ್ಯಾ ಅವರು, ಪ್ರಾಧ್ಯಾಪಕರಾಗಿದ್ದ ತಮ್ಮ ಪತಿ ಡಾ.ಪುರುಷೋತ್ತಮ ಹೆಸರಿನಲ್ಲಿ ₹1 ಲಕ್ಷ ಠೇವಣಿ ಇರಿಸಿ ಅದರಲ್ಲಿ ಬರುವ ಬಡ್ಡಿಯ ಹಣದಲ್ಲಿ ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದರು. ಆಗ ಮುಖ್ಯಶಿಕ್ಷಕ ಶಿವಶಂಕರ ಹಾದಿಮನಿ, ಶಿಕ್ಷಕ ರವಿ ಕುಲಕರ್ಣಿ, ‘ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ಸಹಾಯ ಮಾಡಲು ಹಲವರು ನಮ್ಮಲ್ಲಿ ಠೇವಣಿ ಇರಿಸಿದ್ದಾರೆ. ಇದರ ಬದಲಿಗೆ ಗ್ರಂಥಾಲಯ ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ’ ಎಂದರು. ಸರ್ಕಾರದ ‘ವಿವೇಕ’ ಯೋಜನೆಯಡಿ ಸುಸಜ್ಜಿತವಾದ ಕೊಠಡಿಯೂ ನಿರ್ಮಾಣವಾಯಿತು.

ರಕ್ಷಿತಾ ಮಾನಗಾವಿ, ವಿದ್ಯಾರ್ಥಿನಿಮೊದಲು ಗ್ರಂಥಾಲಯ ಇಲ್ಲದ್ದರಿಂದ ಸ್ವಯಂ ಅಧ್ಯಯನಕ್ಕೆ ತೊಡಕಾಗಿತ್ತು. ಗ್ರಂಥಾಲಯದಿಂದ ಕಲಿಕೆಗೆ ಅನುಕೂಲವಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 94.72 ಅಂಕ ಗಳಿಸಲು ಸಾಧ್ಯವಾಯಿತು.ಅದೇ ಕೊಠಡಿಯಲ್ಲಿ ವಿದ್ಯಾ ಗ್ರಂಥಾಲಯ ಅಭಿವೃದ್ಧಿಪಡಿಸಿದ್ದಾರೆ. ಮಕ್ಕಳು, ಶಿಕ್ಷಕರಿಗೆ ಕುಳಿತುಕೊಳ್ಳಲು 40 ಕುರ್ಚಿ, ಎರಡು ರೀಡಿಂಗ್‌ ಟೇಬಲ್‌, ನಾಲ್ಕು ರ್‍ಯಾಕ್‌, ಐದು ತಿಜೋರಿ ಕೊಡಿಸಿದ್ದಾರೆ. ಕೊಠಡಿಗೆ ಕರ್ಟನ್‌ ವ್ಯವಸ್ಥೆ ಮಾಡುವ ಜತೆಗೆ, ಅಗತ್ಯ ಮೂಲಸೌಕರ್ಯ ಕಲ್ಪಿಸಿದ್ದಾರೆ. ಹಲವು ಪುಸ್ತಕ ನೀಡಿದ್ದಾರೆ. 2024ರ ಮಾರ್ಚ್‌ನಿಂದ ಗ್ರಂಥಾಲಯ ಕಾರ್ಯಾರಂಭ ಮಾಡಿದೆ.

ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿಯಮಿತವಾಗಿ ಗ್ರಂಥಾಲಯ ಬಳಸಿಕೊಳ್ಳುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲೂ ಪುಸ್ತಕ ಪಡೆದು ಓದಿದ್ದಾರೆ.

ಪತಿಯ ಆಸೆಯಿತ್ತು: ‘ವೈದ್ಯರಾಗಿದ್ದ ನನ್ನ ಪತಿ ಡಾ.ಪುರುಷೋತ್ತಮ ಅರಳಿಕಟ್ಟಿ ಇದೇ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ. ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ತುಡಿತ ಅವರದ್ದಾಗಿತ್ತು. ನನ್ನ ಹತ್ತಿರವೂ ಇದನ್ನು ಹೇಳಿಕೊಂಡಿದ್ದರು. ಅವರ ಸವಿನೆನಪಿಗಾಗಿ ಗ್ರಂಥಾಲಯ ಅಭಿವೃದ್ಧಿಪಡಿಸಿ, ಅಳಿಲುಸೇವೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಿರುವ ಪುಸ್ತಕಗಳು, ಇನ್ನಷ್ಟು ಸೌಕರ್ಯ ಕಲ್ಪಿಸುವೆ’ ಎಂದು ಡಾ.ವಿದ್ಯಾ ಅರಳಿಕಟ್ಟಿ  ತಿಳಿಸಿದರು.

‘ನಮ್ಮಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ಎಲ್ಲ ಪ್ರಕಾರಗಳ ಪುಸ್ತಕಗಳಿವೆ. ಕನ್ನಡ ಮತ್ತು ಇಂಗ್ಲಿಷ್‌ ದಿನಪತ್ರಿಕೆ ತರಿಸುತ್ತಿದ್ದೇವೆ. ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕಲಿಕೆಗೆ ಪೂರಕವಾದ ವಾರಪತ್ರಿಕೆ, ಮಾಸಪತ್ರಿಕೆಯನ್ನು ಜೂನ್‌ನಿಂದ ತರಿಸಲಿದ್ದೇವೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಶಿವಶಂಕರ ಹಾದಿಮನಿ.


Spread the love

About Laxminews 24x7

Check Also

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

Spread the love ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ