ನವದೆಹಲಿ : ಒಂದು ವೇಳೆ ಬಿಜೆಪಿಗೆ ಬಹುಮತ ಬರದಿದ್ದರೆ ಪ್ಲಾನ್ “ಬಿ” ಏನು ಎಂಬ ಪ್ರಶ್ನೆಗೆ ಗೃಹಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಎಎನ್‌ಐ ಸುದ್ದಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅಮಿತ್ ಶಾ, ಶೇ 60 ಕ್ಕಿ ಕಡಿಮೆ ಸ್ಥಾನಗಳನ್ನು ಗಳಿಸಿದರೆ ಪ್ಲಾನ್ “ಬಿ” ಅವಶ್ಯಕತೆ ಬೀಳುತ್ತದೆ.
ಆದರೆ ನಾವು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ. ಹಾಗಾಗಿ ಪ್ಲಾನ್ ಬಿ ಚಿಂತನೆ ಅನವಶ್ಯಕ ಎಂದಿದ್ದಾರೆ.
ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಂದ್ರೆ ಸಂವಿಧಾನ ಬದಲಾಯಿಸುತ್ತದೆ ಎನ್ನುವ ಆರೋಪಕ್ಕೆ ಗೃಹ ಸಚಿವ ಅಮಿತ್ ಶಾ ತೆರೆ ಎಳೆದಿದ್ದು, ಕಳೆದ 10 ವರ್ಷದಿಂದ ನಾವು ಬಹುಮತದಲ್ಲಿದ್ದೇವೆ. ಸಂವಿಧಾನ ಬದಲಿಸುವುದಾಗಿದ್ದರೇ ಈ ಅವಧಿಯಲ್ಲಿ ಬದಲಿಸುತ್ತಿದ್ದೆವು. ಆದರೆ, ನಾವು ಅಂತಹ ಕೆಲಸ ಮಾಡಿಲ್ಲ, ಮಾಡುವುದಿಲ್ಲ. ನಮ್ಮ ಬಿಜೆಪಿ ಪಕ್ಷ ಎಂದಿಗೂ ಬಹುಮತದ ದುರುಪಯೋಗ ಪಡೆದಿಲ್ಲ. ಆದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಪಕ್ಷಕ್ಕೆ ಸಿಕ್ಕಿದ್ದ ಬಹುಮತವನ್ನು ದುರುಪಯೋಗ ಪಡಿಸಿಕೊಂಡಿದ್ದರು ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ “ನೀವು ನನಗೆ ಮತ ಹಾಕಿದರೆ ನಾನು ಜೈಲಿಗೆ ಹೋಗಬೇಕಾಗಿಲ್ಲ” ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ಸುಪ್ರೀಂ ಕೋರ್ಟ್‌ಗೆ ಇದಕ್ಕಿಂತ ದೊಡ್ಡ ಅವಮಾನ ಬೇರೊಂದಿಲ್ಲ. (ಚುನಾವಣಾ) ಗೆಲುವು ಮತ್ತು ಸೋಲಿನ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆಯೇ? ಎಂದು ಉತ್ತರಿಸಿದ್ದಾರೆ.