ಕುಂದಾಪುರ: ಕೊರೊನಾ ಕಾಲಘಟ್ಟದಲ್ಲಿ 5 ಲಕ್ಷ ಲೀಟರ್‌ಗೆ ತಲುಪಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಾಲು ಉತ್ಪಾದನೆ ಈಗ 3.5 ಲಕ್ಷ ಲೀ. ಗೆ ಇಳಿದಿದೆ. ಉಭಯ ಜಿಲ್ಲೆಗಳಿಗೆ ನಿತ್ಯವೂ2 ಲಕ್ಷ ಲೀ. ಹಾಲು ನೆರೆಯ ಹಾಲು ಒಕ್ಕೂಟಗಳಿಂದ ಖರೀದಿಸಿ ಪೂರೈಸಲಾಗು ತ್ತಿದೆ.
ಹೈನೋದ್ಯಮದಿಂದ ರೈತರು ವಿಮುಖರಾಗುತ್ತಿರುವುದು ಪ್ರಮುಖ ಕಾರಣ ಎನ್ನುತ್ತಾರೆ ಪರಿಣಿತರು.
ಪ್ರತೀ ಬೇಸಗೆಯಲ್ಲಿ ಹಸುರು ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಇಳಿಕೆಯಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೈನುಗಾರರ ಸಂಖ್ಯೆ ಯಲ್ಲಿ ಇಳಿಮುಖವಾಗಿದ್ದು, ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಗಳು ಆಕ್ರ ಮಿಸಿರುವುದು ಹಾಲಿನ ಪ್ರಮಾಣ ಕಡಿಮೆಯಾಗಲು ಕಾರಣ. ಬೇರೆಡೆಯಿಂದ ಮೇವು ಖರೀದಿಸಿ ಹಸುಗಳಿಗೆ ನೀಡುವುದು ಲಾಭ ವಲ್ಲ. ಸ್ವಂತ ಜಾಗದ ಅಲಭ್ಯತೆ ಇತ್ಯಾದಿ ಕಾರಣದಿಂದ ದಿನೇದಿನೆ ಹಾಲಿನ ಪ್ರಮಾಣ ಇಳಿಕೆಯಾಗುತ್ತಿದೆ.
ಒಕ್ಕೂಟ ಕ್ರಮ: ಹೈನುಗಾರರಿಗೆ ಸಮಸ್ಯೆಯಾಗದಂತೆ, ಹಸುರು ಮೇವು ಕಡಿಮೆ ಇದ್ದಾಗ ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ 12 ರೂ.ಗೆ ದೊರೆಯುವ ಮೇವನ್ನು 6.5 ರೂ.ಗೆ ದೊರೆಯುವಂತೆ ಮೇವಿಗೆ ಮಾಸಿಕ 10 ಲಕ್ಷ ರೂ.ಗಳಂತೆ 40 ಲಕ್ಷ ರೂ. ಸಬ್ಸಿಡಿ ನೀಡಲಾಗಿದೆ ಎಂದರು ಒಕ್ಕೂಟ ನಿರ್ದೇಶಕ ನರಸಿಂಹ ಕಾಮತ್ ಸಾಣೂರು. ಹಾಲು ಕಡಿಮೆ ಇರುವ ಸೊಸೈಟಿಗೆ ಪಶುವೈದ್ಯರು, ಮೇಲ್ವಿಚಾರಕರು ಭೇಟಿ ನೀಡಿ ರೈತರಿಗೆ ತರಬೇತಿ ನೀಡಿದ್ದಾರೆ. ಗುಣಮಟ್ಟದ ಹಾಲು ದೊರೆಯದೇ ಇದ್ದಲ್ಲಿಯೂ ಮಾರ್ಗದರ್ಶನ ನೀಡಲಾಗಿದೆ. ರೈತರಲ್ಲಿ ಹೈನುಗಾರಿಕೆಗೆ ಜುಗುಪ್ಸೆ ಬರದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಮಿಶ್ರ ತಳಿ ಯೋಜನೆಗೆ ಪ್ರೋತ್ಸಾಹ ನೀಡಲಾಗಿದೆ.