RCB ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ ..; ಚೆನ್ನೈ ವಿರುದ್ಧ ಗೆಲ್ಲಬೇಕು, ಲಕ್ನೋ ಸೋಲಬೇಕು
ಬೆಂಗಳೂರು: ಸೋಲಿನ ಮೇಲೆ ಸೋಲನುಭವಿಸಿ ಕಟ್ಟಕಡೆಯ ಸ್ಥಾನಕ್ಕೆ ಕುಸಿದು, ಇನ್ನೇನು ಹೊರಬಿತ್ತು ಎಂಬ ಸ್ಥಿತಿಯಲ್ಲಿದ್ದ ಕನ್ನಡಿಗರ ನೆಚ್ಚಿನ ರಾಯಲ್ ಚಾಲೆಂಜರ್ ಬೆಂಗ ಳೂರು ತಂಡವೀಗ ಸತತ 5 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ನೆಗೆದದ್ದು ನಿಜಕ್ಕೂ ಅಚ್ಚರಿ.
ಇಲ್ಲಿಂದ 4ನೇ ಸ್ಥಾನಕ್ಕೇರಿ, ಇದನ್ನು ಉಳಿಸಿಕೊಂಡರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ!
ಆದರೆ ಈ ಹಾದಿ ಅಷ್ಟು ಸುಲಭ ವಲ್ಲ. ಇಲ್ಲಿ ಲೆಕ್ಕಾಚಾರದ ನಾನಾ ಆಟಗಳಿವೆ. ಮುಖ್ಯವಾಗಿ, ಆರ್‌ಸಿಬಿಗೆ ಉಳಿದಿರುವುದು ಒಂದೇ ಪಂದ್ಯ. ಇದನ್ನು ದೊಡ್ಡ ಅಂತರದಿಂದ ಗೆದ್ದು, ರನ್‌ರೇಟ್ ಏರಿಸಿಕೊಂಡು, ಉಳಿದ ಕೆಲವು ತಂಡಗಳು ಸೋತರಷ್ಟೇ ಆರ್‌ಸಿಬಿಗೆ ಪ್ಲೇ ಆಫ್ ಸಾಧ್ಯ!
ಚೆನ್ನೈ ಎದುರಾಳಿ
ಆರ್‌ಸಿಬಿಯ ಕೊನೆಯ ಎದುರಾಳಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್. ಇವೆ ರಡೂ ಈ ಋತುವಿನ ಉದ್ಘಾಟನ ಪಂದ್ಯ ವಾಡಿದ ತಂಡಗಳು. ಚೆನ್ನೈ ಯಲ್ಲಿ ನಡೆದ ಈ ಮುಖಾ ಮುಖೀಯಲ್ಲಿ ಆರ್‌ಸಿಬಿ 6 ವಿಕೆಟ್‌ಗಳಿಂದ ಸೋತಿತ್ತು. ಶನಿವಾರ ಬೆಂಗ ಳೂರಿ ನಲ್ಲಿ ಇತ್ತಂಡಗಳ ನಡು ವಿನ ದ್ವಿತೀಯ ಸುತ್ತಿನ ಪಂದ್ಯ ನಡೆಯಲಿದೆ. ಇದಕ್ಕೆ ಆರ್‌ಸಿಬಿ ದೊಡ್ಡ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಬೇಕಿದೆ.
ರನ್‌ರೇಟ್ ಲೆಕ್ಕಾಚಾರ
ಆರ್‌ಸಿಬಿ 13 ಪಂದ್ಯಗಳಿಂದ 12 ಅಂಕಗಳನ್ನು ಹೊಂದಿದೆ. ಹೀಗಾಗಿ ಪ್ಲೇ ಆಫ್ ಪ್ರವೇಶಿಸಬೇಕಾದರೆ ಚೆನ್ನೈಯನ್ನು ಮಣಿಸಲೇಬೇಕಿದೆ. ಅಷ್ಟೇ ಅಲ್ಲ, ರನ್‌ರೇಟ್‌ನಲ್ಲೂ ಚೆನ್ನೈಯನ್ನು ಮೀರಿಸಬೇಕು. ಸದ್ಯ ಚೆನ್ನೈ 0.528 ರನ್‌ರೇಟ್‌ನೊಂದಿಗೆ 3ನೇ ಸ್ಥಾನದಲ್ಲಿದೆ. ಹೊಂದಿರುವ ಅಂಕ 14. ಆರ್‌ಸಿಬಿ 0.387 ರನ್‌ರೇಟ್ ಹೊಂದಿದ್ದು, 5ನೇ ಸ್ಥಾನಿಯಾಗಿದೆ.
ರನ್‌ರೇಟ್‌ನಲ್ಲಿ ಚೆನ್ನೈಯನ್ನು ಮೀರಿಸಬೇಕಾದರೆ ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಗೆಲ್ಲಬೇಕಿದೆ. ಉದಾ ಹರಣೆಗೆ, ಆರ್‌ಸಿಬಿ ಮೊದಲು ಬ್ಯಾಟಿಂಗ್ ನಡೆಸಿ 200 ರನ್ ಗಳಿಸಿದರೆ, ಚೆನ್ನೈಯನ್ನು 182ಕ್ಕೆ ನಿಯಂತ್ರಿಸಬೇಕು.