ವಿಜಯಪುರ: ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾದರೂ ಆದೇಶ ಪಡೆಯದೆ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಇಬ್ಬರು ಶಿಕ್ಷಕರನ್ನು ಸರ್ಕಾರಿ ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಚುನಾಣಾಧಿಕಾರಿ ಆದೇಶಿಸಿದ್ದಾರೆ.
ಈ ಇಬ್ಬರು ಶಿಕ್ಷಕರನ್ನು ಸಸ್ಪೆಂಡ್ ಮಾಡಿ ಮಂಗಳವಾರ ಪ್ರತ್ಯೇಕ ಆದೇಶ ಹೊರಡಿಸಿರುವ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಭೂಬಾಲನ್, ಚುನಾವಣೆಯಂಥ ಮಹತ್ವದ ಕರ್ತವ್ಯವಾಗಿದ್ದರೂ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಸಸ್ಪೆಂಡ್ ಮಾಡಿದ್ದಾಗಿ ಆದೇಶದಲ್ಲಿ ವಿವರಿಸಿದ್ದಾರೆ.
ಬಸವನಬಾಗೇವಾಡಿ ತಾಲೂಕಿನ ಅಬ್ಬಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಭರತ ಭೀಮಪ್ಪ ಗಡೇದ ಎಂಬ ಶಿಕ್ಷಕರೇ ಸಸ್ಪೆಂಡ್ ಆದವರು. ತಮ್ಮ ಶಾಲೆಯ ಮುಖ್ಯೋಪಾದ್ಯರು ಚುನಾವಣೆ ಕರ್ತವ್ಯಕ್ಕೆ ನಿಯೋಜಿತ ಆದೇಶ ಪಡೆಯುವಂತೆ ಸೂಚಿಸಿದರೂ ಭರತ ನಿರಾಕರಿಸಿದ್ದಾರೆ.
ಅಲ್ಲದೇ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಟ್ಟಿರುವ ಶಿಕ್ಷಕ ಭರತ, ಮೊಬೈಲ್ ಕರೆ ಮಾಡಿ ತಿಳಿಸಿದರೂ ತಾನು ಮಹಾರಾಷ್ಟ್ರದ ಪುಣೆಯಲ್ಲಿರುವುದಾಗಿ ಹೇಳಿ ಮೊಬೈಲ್ ಸ್ವೀಪ್ ಆಫ್ ಮಾಡಿದ್ದಾರೆ.
ಚುನಾವಣೆಯಂಥ ಕರ್ತವ್ಯದ ವಿಷಯದಲ್ಲಿ ನಿರ್ಲಕ್ಷ ತೋರಿದ ಕುರಿತು ಸಹಾಯಕ ಚುನಾವಣಾಧಿಕಾರಿ ನೀಡಿರುವ ವರದಿ ಆಧರಿಸಿ ಶಿಕ್ಷಕ ಭರತ ಅವರನ್ನು ಜಿಲ್ಲಾಧಿಕಾರಿ ಸಸ್ಪೆಂಡ್ ಮಾಡಿದ್ದಾರೆ. ಕೂಡಲೇ ಭರತ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ.
ಇನ್ನು ತಾಳಿಕೋಟೆ ತಾಲೂಕಿನ ಹಾಲಗೋಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಆರ್.ಐ.ಮುಲ್ಲಾ ಏ.1 ರಂದು ಶಾಲೆಗೆ ಗೈರು ಹಾಜರಾಗಿದ್ದಲ್ಲದೇ, ಚುನಾವಣೆ ಆದೇಶದ ಪ್ರತಿ ಪಡೆಯುವಂತೆ ಸಿಆರ್‍ಪಿ ಐ.ಎಲ್.ಆಲಮೇಲ್ ಅವರು ನೀಡಿದ ಸೂಚನೆಯನ್ನೂ ನಿರ್ಲಕ್ಷಿಸಿದ್ದಾರೆ.
ಅಲ್ಲದೇ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಚುನಾವಣೆಯಂಥ ಮಹತ್ವದ ಕರ್ತವ್ಯದ ವಿಷಯದಲ್ಲಿ ನಿರ್ಲಕ್ಷ ತೋರಿದ್ದರಿಂದ ಮುದ್ಧೇಬಿಹಾಳ ತಹಸೀಲ್ದಾರರ ವರದಿ ಆಧರಿಸಿ ಸೇವೆಯಿಂದ ಸಸ್ಪೆಂಡ್ ಮಾಡಿದ್ದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಕೂಡಲೇ ಆರ್.ಐ.ಮುಲ್ಳಾ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ.
Laxmi News 24×7