ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಎಸ್ ಐಟಿ(Special investigative team) ಅಧಿಕಾರಿಗಳ ತಂಡ ಇಂದು ಬುಧವಾರ ಹಾಸನ ಜಿಲ್ಲೆಯ ಹೆಚ್ ಡಿ ರೇವಣ್ಣ ನಿವಾಸಕ್ಕೆ ತೆರಳಿ ಸ್ಥಳ ಮಹಜರು ನಡೆಸಲಿದ್ದಾರೆ.
ಹಾಸನದಲ್ಲಿರುವ ಹೆಚ್ ಡಿ ರೇವಣ್ಣ ನಿವಾಸ ಮತ್ತು ಫಾರ್ಮ್ ಹೌಸ್ ನಲ್ಲಿ ತಮ್ಮ ವಿರುದ್ಧ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಹಲವು ಮಹಿಳೆಯರು ಮತ್ತು ಯುವತಿಯರು ದೂರು ನೀಡಿರುವ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳ ತಂಡ ಹಾಸನದಲ್ಲಿ ತೀವ್ರ ತನಿಖೆ ನಡೆಸಲಿದ್ದಾರೆ.

ಎಸ್ ಐಟಿ ಅಧಿಕಾರಿಗಳು ಈಗಾಗಲೇ ಇಬ್ಬರಿಗೂ ವಿಚಾರಣೆಗೆ ಹಾಜರಾಗಲು ನೊಟೀಸ್ ಜಾರಿ ಮಾಡಿದ್ದು ಜರ್ಮನಿಯಲ್ಲಿರುವ ಕಾರಣ ಇಂದು ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿಲ್ಲ. ತಮ್ಮ ವಕೀಲರ ಮೂಲಕ ಅಧಿಕಾರಿಗಳ ಬಳಿ ಸಮಯಾವಕಾಶ ಕೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೇ 4ಕ್ಕೆ ರೇವಣ್ಣ ವಿಚಾರಣೆಗೆ ಹಾಜರು: ಇನ್ನು ಮಾಜಿ ಸಚಿವ ಶಾಸಕ ಹೆಚ್ ಡಿ ರೇವಣ್ಣ ಅವರು ಮೇ 4ರಂದು ಎಸ್ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಈಗಾಗಲೇ ತಿಳಿಸಿದ್ದಾರೆ. ಪ್ರಕರಣದಲ್ಲಿ ಹೆಚ್ ಡಿ ರೇವಣ್ಣ ಎ1 ಮತ್ತು ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ.
ಪ್ರಕರಣದಲ್ಲಿ ಕೇಸು ದಾಖಲಾಗುತ್ತಿದ್ದಂತೆ ದೇವರ ಮೊರೆ ಹೋಗಿರುವ ಹೆಚ್ ಡಿ ರೇವಣ್ಣ ಅವರು ಹಾಸನದ ಹೊಳೆನರಸೀಪುರದಲ್ಲಿ ದೇವರ ಮೊರೆ ಹೋಗಿದ್ದಾರೆ. ಇಂದು ಬೆಳಗ್ಗೆಯಿಂದಲೇ ಅವರ ನಿವಾಸದಲ್ಲಿ ಹೋಮ ನಡೆಯುತ್ತಿದೆ. ಹೊಳೆನರಸೀಪುರದ ಹತ್ತಿರದ ದೇವಾಲಯಗಳಿಗೂ ಭೇಟಿ ನೀಡಿ ರೇವಣ್ಣ ಪೂಜೆ ಸಲ್ಲಿಸುತ್ತಿದ್ದಾರೆ.
Laxmi News 24×7