ಬೆಳಗಾವಿ, ನ.18- ರಾಜ್ಯ ಸರಕಾರ ಮರಾಠಿಗರ ಓಲೈಕೆಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 50 ಕೋಟಿ ರೂ. ಮೀಸಲಿಟ್ಟಿರುವ ಬೆನ್ನಲೆ ಕಾರವಾರ, ಬೆಳಗಾವಿ, ಖಾನಾಪುರ, ನಿಪ್ಪಾಣಿ ಮಹಾರಾಷ್ಟ್ರದ್ದು ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಹೇಳಿಕೆ ನೀಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರದ ಒಂದು ಭಾಗ ಎಂದು ಬಾಳಾಸಾಹೇಬ್ ಠಾಕ್ರೆ ಅವರ ಕನಸಾಗಿತ್ತು. ಠಾಕ್ರೆ ಕನಸು ನನಸು ಮಾಡಲು ಪಣ ತೋಡಬೇಕು. ಈ ಭಾಗದಲ್ಲಿ ಮರಾಠಿ ಭಾಷಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಮಹಾರಾಷ್ಟ್ರಕ್ಕೆ ಬರಲು ಸನ್ನದ್ದರಾಗಿದ್ದಾರೆ. ಈ ರೀತಿಯಲ್ಲಿ ಹೋರಾಟ ನಡೆಸಬೇಕೆಂದು ಕರೆ ನೀಡಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಅಜಿತ್ ಪವಾರ್ ಹೇಳಿಕೆ ಖಂಡಿಸಿ ರಾಜ್ಯದಾದ್ಯಂತ ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ತೊಡಗಿವೆ. ಗಡಿ ಹೋರಾಟ ಸಮಿತಿ ಅಧ್ಯಕ್ಷ ರಾವ್ ಬೈಂದೂರ್, ಜಯಕರ್ನಾಟಕದ ಡಾ.ಕೆ.ಎನ್.ಜಗದೀಶ್, ಡಾ.ರಾಜ್‍ಕುಮಾರ್ ಸೇನೆ ಅಧ್ಯಕ್ಷ ತ್ಯಾಗರಾಜ್ ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಅಜಿತ್ ಪವಾರ್ ಹೇಳಿಕೆಯನ್ನು ಖಂಡಿಸಿ, ಬೆಳಗಾವಿ, ನಿಪ್ಪಾಣಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗವೆಂದು ಘೋಷಿಸಿ; ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
Laxmi News 24×7