ಬೆಂಗಳೂರು: ಮದ್ಯ ಸೇವಿಸದಂತೆ ಬುದ್ಧಿಮಾತು ಹೇಳಿದ ಸಾಮಾಜಿಕ ಕಾರ್ಯಕರ್ತನನ್ನು ಚಾಕುವಿನಿಂದ ಇರಿದು ಪರಿಚಯಸ್ಥ ಯುವಕರೇ ಹತ್ಯೆ ಮಾಡಿದ್ದಾರೆ.
ಮೈಲನಾಪ್ಪನಹಳ್ಳಿ ನಿವಾಸಿ ವೆಂಕಟೇಶ್ (45) ಕೊಲೆಯಾದ ಸಾಮಾಜಿಕ ಕಾರ್ಯಕರ್ತ. ಈ ಸಂಬಂಧ ಪವನ್ ಕುಮಾರ್ ಮತ್ತು ನಂದ ಗೋಪಾಲ ಅಲಿಯಾಸ್ ನಂದನನ್ನು ಪೊಲೀಸರು ಬಂಧಿಸಿದ್ದಾರೆ.ರಾಮಚಂದ್ರಪುರದ ಆಟದ ಮೈದಾನದಲ್ಲಿ ಮಂಗಳವಾರ ರಾತ್ರಿ 11 ಗಂಟೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮಚಂದ್ರಪುರದಲ್ಲಿ ನೆಲೆಸಿದ್ದ ವೆಂಕಟೇಶ್, ಕೆಲ ತಿಂಗಳ ಹಿಂದಷ್ಟೇ ಮೈಲನಾಪ್ಪನಹಳ್ಳಿಗೆ ವಾಸ್ತವ್ಯ ಬದಲಾಯಿಸಿದ್ದರು. ಯುಗಾದಿ ಹಬ್ಬದ ದಿನ ತಮ್ಮ ಸೋದರರ ಕರೆ ಮೇರೆಗೆ ರಾಮಚಂದ್ರಪುರಕ್ಕೆ ಬಂದಿದ್ದ ವೆಂಕಟೇಶ್, ಸಂಬಂಧಿಕರ ಜತೆ ಮಂಗಳವಾರ ರಾತ್ರಿ ಮದ್ಯ ಸೇವಿಸಿದ್ದರು. ಆನಂತರ ಆಟದ ಮೈದಾನ ಬಳಿ ರಾತ್ರಿ 11 ಗಂಟೆಗೆ ಅಣ್ಣನ ಮಗನ ಜತೆ ವಾಯು ವಿಹಾರಕ್ಕೆ ತೆರಳಿದ್ದರು.
ಅಲ್ಲಿಯೇ ಪವನ್ ಮತ್ತು ನಂದ ಮದ್ಯ ಸೇವಿಸುತ್ತ ಕುಳಿತಿದ್ದರು. ಇವರನ್ನು ನೋಡಿದ ವೆಂಕಟೇಶ್, ಏನ್ರೋ ನನ್ನ ಮುಂದೆ ಹುಟ್ಟಿದವರು. ಈಗಲೇ ಕುಡಿಯೋದು ಕಲಿತಿದ್ದೀರಾ ಎಂದು ರೇಗಿದ್ದಾರೆ. ಈ ಮಾತಿಗೆ ಆಕ್ಷೇಪಿಸಿದ ಆರೋಪಿಗಳು, ನಮ್ಮಿಷ್ಟ ನೀನ್ಯಾರು ಕೇಳೋದಕ್ಕೆ ಎಂದಿದ್ದಾರೆ. ಆಗ ಕೆರಳಿದ ವೆಂಕಟೇಶ್, ನಂದನಿಗೆ ಹಿಡಿದು ಬಾರಿಸಿದ್ದಾರೆ. ತಳ್ಳಾಟ ನೂಕಾಟ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಪವನ್, ನಮಗೆ ಹೊಡೀತಿಯಾ ಎಂದು ಹೇಳಿ ಅಲ್ಲೇ ಸಮೀಪದಲ್ಲೇ ಇದ್ದ ಮನೆಗೆ ತೆರಳಿ ಚಾಕು ತಂದು ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಜೊತೆಯಲ್ಲಿ ಇದ್ದವರು ಗಾಯಾಳುನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ವೆಂಕಟೇಶ್ ಅಸುನೀಗಿದ್ದಾರೆ. ಈ ಬಗ್ಗೆ ಮೃತರ ಸೋದರ ಪುತ್ರ ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.