ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿರುವ ಜೆಡಿಎಸ್ ಅಧ್ಯಕ್ಷ ಹಾಗೂ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ರಾಜಕೀಯ ಮುಖಂಡರಿಗೆ ಬಾಡೂಟ ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪದ ಮೇಲೆ, ಚುನಾವಣಾ ಅಧಿಕಾರಿಗಳ ತಂಡ ಬುಧವಾರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಕ್ಷಿಪ್ರ ಕಾರ್ಯಪಡೆ ತಂಡ (ಎಫ್‌ಎಸ್‌ಟಿ) ಹಾಗೂ ವಿಡಿಯೊ ಪರಿವೀಕ್ಷಣಾ ತಂಡ (ವಿಡಿಯೊ ಪರಿವೀಕ್ಷಣಾ ತಂಡ) ಸ್ಥಳಕ್ಕೆ ಭೇಟಿ ನೀಡಿದಾಗ ತೋಟದಲ್ಲಿ ಶಾಮಿಯಾನ ಹಾಕಿ, ಸುಮಾರು 50 ಕುರ್ಚಿ ಹಾಗೂ ಊಟದ ಟೇಬಲ್‌ಗಳನ್ನು ಹಾಕಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಅಡುಗೆಯವರು ಬಾಡೂಟ ಸಿದ್ಧಪಡಿಸುತ್ತಿದ್ದರು.
‘ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರು ಸೇರಿದಂತೆ ಕುಟುಂಬದ ಸದಸ್ಯರು ಇರಲಿಲ್ಲ. ಕೆಲಸ ಮಾಡುವ ಕಾರ್ಮಿಕರು ಹಾಗೂ ಕೆಲ ಸಿಬ್ಬಂದಿ ಮಾತ್ರ ಇದ್ದರು. ಯುಗಾದಿ ಹಬ್ಬದ ಪ್ರಯುಕ್ತ ಮನೆಗೆ ಬರುವ ಸಂಬಂಧಿಕರಿಗೆ ಮಧ್ಯಾಹ್ನಕ್ಕೆ ಊಟ ಸಿದ್ಧಪಡಿಸಲಾಗುತ್ತಿತ್ತು. ಅದಕ್ಕಾಗಿ, ಹೊರಗಡೆ ಶಾಮಿಯಾನ ವ್ಯವಸ್ಥೆ ಮಾಡಿ, ಕುರ್ಚಿ ಮತ್ತು ಟೇಬಲ್ ಹಾಕಲಾಗಿತ್ತು ಎಂದು ಸ್ಥಳದಲ್ಲಿದ್ದವರು ಹೇಳಿದರು’ ಎಂದು ಸಹಾಯಕ ಚುನಾವಣಾ ಅಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಚುನಾವಣಾ ಸಿಬ್ಬಂದಿಗೆ ತೋಟದ ಮನೆಯೊಳಕ್ಕೆ ಅಲ್ಲಿನ ಕಾರ್ಮಿಕರು ಬಿಡುತ್ತಿಲ್ಲ ಎಂಬ ಮಾಹಿತಿ ಬಂತು. ಹಾಗಾಗಿ, ನಾನೇ ಸ್ವತಃ ಸ್ಥಳಕ್ಕೆ ತೆರಳಿದೆ. ಒಳಗಡೆ ರಾಜಕೀಯ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇರಲಿಲ್ಲ. ರಾಜಕೀಯ ಪಕ್ಷದ ಬಾವುಟ, ಚಿಹ್ನೆ ಹಾಗೂ ಯಾವುದೇ ಸಾಮಗ್ರಿಗಳು ಇರಲಿಲ್ಲ. ಆದರೂ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ರೀತಿ ಊಟದ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ಸ್ಥಳದಲ್ಲಿದ್ದವರಿಗೆ ಎಚ್ಚರಿಕೆ ನೀಡಲಾಯಿತು. ಶಾಮಿಯಾನ, ಕುರ್ಚಿ ಹಾಗೂ ಟೇಬಲ್‌ಗಳನ್ನು ತೆರವುಗೊಳಿಸಲಾಯಿತು’ ಎಂದು ಹೇಳಿದರು.