ನವದೆಹಲಿ: ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಶನಿವಾರ ಶೋಧ ಕಾರ್ಯ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡದ ಮೇಲೆ ಸ್ಥಳೀಯರ ಗುಂಪು ದಾಳಿ ನಡೆಸಿದ್ದು, ಒಬ್ಬ ಅಧಿಕಾರಿಗೆ ಗಾಯವಾಗಿದೆ. ಇದರ ನಡುವೆಯೂ ಎನ್‌ಐಎ ತಂಡ, 2022ರ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಸಂಚುಕೋರರನ್ನು ಬಂಧಿಸಿದೆ.
ಎನ್‌ಐಎ ನಡೆಯನ್ನು ತೀವ್ರವಾಗಿ ಖಂಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ಎನ್‌ಐಎ ಅಧಿಕಾರಿಗಳೇ ಭೂಪತಿನಗರದಲ್ಲಿ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ. ಈ ಅಧಿಕಾರಿಗಳು ಮಧ್ಯರಾತ್ರಿ ಹಲವಾರು ಮನೆಗಳಿಗೆ ನುಗ್ಗಿದ್ದಾರೆ. ಆಗ ಗ್ರಾಮಸ್ಥರು ಆತ್ಮರಕ್ಷಣೆಗೆ ಯತ್ನಿಸಿದ್ದಾರೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನೊಂದೆಡೆ, ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು, ಎನ್‌ಐಎ ಮೇಲಿನ ದಾಳಿಯನ್ನು ರಾಜ್ಯ ಪ್ರಾಯೋಜಿತ ದಾಳಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
ಘಟನೆ ವಿವರ: ‘ಪಶ್ಚಿಮ ಬಂಗಾಳದ ಭೂಪತಿನಗರದ ಮನೆಯೊಂದರಲ್ಲಿ 2022ರ ಡಿಸೆಂಬರ್‌ನಲ್ಲಿ ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಮೂವರು ಮೃತಪಟ್ಟಿದ್ದರು. ಈ ಪ್ರಕರಣ ಕುರಿತು ದೊರೆತಿದ್ದ ಮಹತ್ವದ ಮಾಹಿತಿ ಮೇರೆಗೆ ಮೇದಿನಿಪುರ ಜಿಲ್ಲೆಗೆ ಎನ್‌ಐಎ ತಂಡ ತೆರಳಿದ್ದಾಗ, ಅಲ್ಲಿನ ಕೆಲವರ ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿತು. ಇದರ ನಡುವೆಯೂ ಇಬ್ಬರು ಪ್ರಮುಖ ಸಂಚುಕೋರರನ್ನು ಬಂಧಿಸಲಾಗಿದೆ’ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
‘ಬಾಲೈ ಚರಣ್ ಮೈತಿ ಮತ್ತು ಮನೋಬ್ರತಾ ಜಾನಾ ಬಂಧಿತರು. ಇವರ ಬಂಧನಕ್ಕೂ ಮುನ್ನ ಎನ್‌ಐಎ ತಂಡ ಜಾನಾ ಅವರ ಮನೆ ಸೇರಿದಂತೆ ಐದು ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿತ್ತು. ಈ ವೇಳೆಯೇ ಜನರ ಗುಂಪು ಎನ್‌ಐಎ ತಂಡದ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ ಒಬ್ಬ ಅಧಿಕಾರಿಗೆ ಗಾಯಗಳಾಗಿದ್ದು, ತನಿಖಾ ಸಂಸ್ಥೆಗೆ ಸೇರಿದ ವಾಹನ ಹಾನಿಗೊಂಡಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ದಾಳಿ ಕುರಿತು ಎನ್‌ಐಎ ಭೂಪತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಘಟನೆಯ ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸ್ ಪಡೆಯನ್ನು ಅಲ್ಲಿ ನಿಯೋಜಿಸಲಾಗಿದೆ.
ಇತ್ತೀಚೆಗೆ ಪಡಿತರ ವಿತರಣೆಯ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಆಡಳಿತಾರೂಢ ಟಿಎಂಸಿ ನಾಯಕ ಶಾಜಹಾನ್ ಶೇಖ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ತಂಡ ಶೋಧ ನಡೆಸಿತ್ತು. ಆ ವೇಳೆ ಸಂದೇಶ್‌ಖಾಲಿಯಲ್ಲಿನ ಜನರ ಗುಂಪು ಇ.ಡಿಯ ಮೂವರು ಅಧಿಕಾರಿಗಳ ಮೇಲೆ ದಾಳಿ ನಡೆಸಿತ್ತು. ಅದರ ನೆನಪು ಮಾಸುವ ಮುನ್ನವೇ ಈ ಘಟನೆ ನಡೆದಿದೆ.
ಭೂಪತಿನಗರ ಸ್ಫೋಟಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸುವಂತೆ ಕೋರಿ ಕಲ್ಕತ್ತ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ಆ ಬಳಿಕ ಅದು ಎನ್‌ಐಎಗೆ ಹಸ್ತಾಂತರವಾಗಿತ್ತು.