ಮೈಸೂರು: ಕೆಲವು ದಿನಗಳ ಹಿಂದೆಯ ತನಕವೂ ಕಾಂಗ್ರೆಸ್ ನೊಂದಿಗೆ ಕಾಣಿಸಿಕೊಂಡು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಎಂಎಲ್ ಸಿ ಎಚ್ ವಿಶ್ವನಾಥ್ ಅವರು ಇದೀಗ ರಾಜಕೀಯ ವರಸೆ ಬದಲಿಸಿರುವುದು ಗೋಚರಿಸಿದೆ. ಇದೀಗ ಮಾತನಾಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯ ಪಕ್ಕಕ್ಕಿಟ್ಟು ಮೈಸೂರಿನ ಯದುವಂಶದ ಕುಡಿಯನ್ನು ಪಕ್ಷಾತೀತವಾಗಿ, ಅವಿರೋಧವಾಗಿ ಆಯ್ಕೆ ಮಾಡಿ ಎಂಬ ಸಲಹೆ ನೀಡಿದ್ದಾರೆ.
ವಿಶ್ವನಾಥ್ ಅವರ ಈ ನಡೆ ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಮೊನ್ನೆಯ ತನಕವೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರನ್ನು ಟೀಕೆ ಮಾಡುತ್ತಾ ಬಂದಿದ್ದಲ್ಲದೆ, ಕಾಂಗ್ರೆಸ್ ಪಾಳಯದಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ ಯಾವಾಗ ಕಾಂಗ್ರೆಸ್ ಎಂ.ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿತೋ ಆ ನಂತರ ಅಂತರ ಕಾಪಾಡಿಕೊಂಡಿದ್ದರು.
ಈ ನಡುವೆ ಬಿಜೆಪಿ ನಾಯಕರ ಬಗ್ಗೆ ವಿಶ್ವನಾಥ್ ಅವರು ಯಾವುದೇ ರೀತಿಯ ಟೀಕೆ ಮಾಡುತ್ತಿದ್ದರೂ ಬಿಜೆಪಿ ನಾಯಕರು ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಹೊಸ ರಾಜಕೀಯ ಬೆಳವಣಿಗೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿ ಸಹಾಯ ಕೋರಿದ್ದಾರೆ.