ವಿಜಯಪುರ: ಆಟವಾಡುವ ಗುಂಗಿನಲ್ಲಿ ತೆರೆದಿದ್ದ ಕೊಳವೆ ಬಾವಿಗೆ ಎರಡು ವರ್ಷದ ಮಗುವೊಂದು ಆಯಾತಪ್ಪಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಸಂಭವಿಸಿದೆ. ಸತತ 12 ಗಂಟೆಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ತಂಡಕ್ಕೆ ಮಗುವನ್ನು ಹೊರತೆಗೆಯುವುದು ದೊಡ್ಡ ಸವಾಲಾಗಿದ್ದು, ಸದ್ಯ ಕಾರ್ಯಾಚರಣೆ ಕೆಲಸ ಮುಂದುವರೆದಿದೆ.
ಭೀಮಾತೀರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಸಂಭವಿಸಿದ್ದು, 2 ವರ್ಷದ ಬಾಲಕ ಸಾತ್ವಿಕ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಮಗುವಿನ ಕಾಲುಗಳ ಅಲುಗಾಟ ದೃಶ್ಯದಲ್ಲಿ ಸೆರೆಯಾಗಿದ್ದು, ಬಾಲಕ ಜೀವಂತವಾಗಿ, ಸುರಕ್ಷಿತವಾಗಿ ಹೊರಬರಲಿ ಎಂದು ಎಲ್ಲರು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಭೀಕರದ ಬರದಿಂದಾಗಿ ಬತ್ತಿದ ಭೀಮಾ ದಡದಲ್ಲಿ ಜೀವ ಜಲಕ್ಕಾಗಿ ಮಗುವಿನ ಪೋಷಕರು ಕೊಳವೆ ಬಾವಿ ತೆಗೆಸಿದ್ದರು. ಬೋರ್ ತೆಗೆಸಿ ಕೆಲವೇ ಗಂಟೆಗಳಲ್ಲಿ ಇಂತಹ ದುರ್ಘಟನೆ ಸಂಭವಿಸುತ್ತದೆ ಎಂದು ಊಹಿಸಿರಲಿಲ್ಲ ಎಂದು ಮಗುವಿನ ತಂದೆ ಅಳಲು ತೋಡಿಕೊಂಡಿದ್ದಾರೆ. ಸದ್ಯ 20 ಅಡಿ ಆಳದಲ್ಲಿ ಸಿಲುಕಿರುವ ಬಾಲಕನಿಗೆ ಆಮ್ಲಜನಕ ಪೂರೈಕೆ ಮಾಡಲಾಗಿದ್ದು, ಮಧ್ಯದಲ್ಲಿ ಸಿಲುಕಿರುವ ಕಲ್ಲನ್ನು ಬದಿಗೆ ಸರಿಸಿ ಮಗುವನ್ನು ಸುರಕ್ಷಿತವಾಗಿ ಹೊರಗೆ ಕರೆತರಬೇಕಿದೆ. ಯಾವುದೇ ತೊಂದರೆಯಾಗದಂತೆ ತುರ್ತಾಗಿ ಮಗುವನ್ನು ಹೊರತರುವುದು ಸದ್ಯ ದೊಡ್ಡ ಸವಾಲಾಗಿದೆ.