ಅಥಣಿ: ಪಟ್ಟಣದಲ್ಲಿ ದಿನೇದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಕಾರಣ ಜನ ಬೇಸತ್ತು ಹೋಗಿದ್ದಾರೆ. ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ಜನರೂ ಹೈರಾಣಾಗಿದ್ದಾರೆ. ಸಂಚಾರ ಪೊಲೀಸರು ಇದ್ದೂ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದು, ಒನ್ ವೇಗಳಲ್ಲಿ ಓಡಿಸುವುದು, ಬೇಕಾಬಿಟ್ಟಿ ಪಾರ್ಕಿಂಗ್ ಮಾಡುವುದು ನಡೆದೇ ಇದೆ.
ಭಾರಿ ವಾಹನಗಳ ಪ್ರವೇಶ, ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ, ಸಂಚಾರಿ ಪೊಲೀಸ್ ಸಿಬ್ಬಂದಿಯ ಕೊರತೆ, ಎಲ್ಲೆಂದರಲ್ಲಿ ಖಾಸಗಿ ವಾಹನಗಳ ನಿಲುಗಡೆ ಪಟ್ಟಣದ ಸಂಚಾರ ಶಿಸ್ತನ್ನು ಹಾಳು ಮಾಡಿದೆ.
ಪಟ್ಟಣ ಹೊರವಲಯದಲ್ಲಿ ಜೇವರ್ಗಿ- ಸಂಕೇಶ್ವರ ರಾಜ್ಯ ಹೆದ್ದಾರಿ ಕಾಮಗಾರಿಯೂ ಆಮೆ ಗತಿಯಲ್ಲಿ ಸಾಗಿದೆ. ತಾಲ್ಲೂಕು ಆಡಳಿತದ ಶಕ್ತಿಸೌಧ, ಮಿನಿ ವಿಧಾನಸೌಧಕ್ಕೆ ಹೋಗುವ ರಸ್ತೆ ತೀರ ಹದಗೆಟ್ಟಿರುವುದರಿಂದ ವಿಪರೀತ ದೂಳಿನಲ್ಲಿ ಸಂಚರಿಸುವುದು ದುರ್ಲಭವಾಗಿದೆ.
ಪಟ್ಟಣದ ಮಾರ್ಗವಾಗಿ ಜತ್ತ- ಜಾಂಬೋಟಿ ಮತ್ತು ಜೇವರ್ಗಿ- ಸಂಕೇಶ್ವರ ರಾಜ್ಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಸುಗಮ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ನಿರ್ಮಾಣವಾಗದ ಬೈಪಾಸ್: ಎರಡು ರಾಜ್ಯ ಹೆದ್ದಾರಿಗಳಿಗೆ ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂಬುದು ಪಟ್ಟಣದ ಜನತೆಯ ಬಹುದಿನಗಳ ಅಗ್ರಹವಾಗಿದೆ. ಆದರೆ, ಸರ್ಕಾರ ಬೈಪಾಸ್ ರಸ್ತೆಗೆ ಕೇವಲ ಸರ್ವೆ ಕಾರ್ಯ ನಡೆಸಿದ್ದು, ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.
ಇದರಿಂದ ಪಟ್ಟಣದ ಮೂಲಕವೇ ಸಾರಿಗೆ ಬಸ್‌ಗಳು, ಗೂಡ್ಸ್ ವಾಹನಗಳು, ಖಾಸಗಿ ವಾಹನಗಳು, ಮರಳು ತುಂಬಿದ ಲಾರಿಗಳು ಮತ್ತು ಸರಕು ಸಾಗಿಸುವ ಭಾರಿ ವಾಹನಗಳು ಕೂಡ ಒಂದೇ ದಾರಿಯಲ್ಲಿ ಸಂಚರಿಸುತ್ತಿವೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ರಸ್ತೆಗಳು ಕೂಡ ಬೇಗನೆ ಹಾಳಾಗುತ್ತಿವೆ. ಅಲ್ಲದೇ, ಆಗಾಗ ರಸ್ತೆ ಅಪಘಾತಗಳು, ಟ್ರಾಫಿಕ್ ಕಿರಿಕಿರಿ ಹೆಚ್ಚಾಗುತ್ತಿದೆ.