ನವದೆಹಲಿ: ಲೋಕಸಭಾ ಚುನಾವಣೆ (Lok Sabha Election) ಹೊಸ್ತಿಲಲ್ಲಿರುವಾಗಲೇ ಕಾಂಗ್ರೆಸ್‌ಗೆ ದಿನದಿಂದ ದಿನಕ್ಕೆ ಸಂಕಷ್ಟಗಳು ನಿರಂತರವಾಗಿ ಹೆಚ್ಚುತ್ತಿದ್ದು, ಮರುಮೌಲ್ಯಮಾಪನ ಪ್ರಕ್ರಿಯೆಗಳ (Revaluation Proceedings) ವಿರುದ್ಧ ಪಕ್ಷದ ಅರ್ಜಿಯನ್ನು ದೆಹಲಿ ಹೈಕೋರ್ಟ್ (Delhi High Court) ತಿರಸ್ಕರಿಸಿದ ಕೆಲವೇ ಗಂಟೆಗಳ ನಂತರ ಆದಾಯ ತೆರಿಗೆ ಇಲಾಖೆ ಕೂಡ ಕಾಂಗ್ರೆಸ್‌ಗೆ (Congress) ಶಾಕ್ ನೀಡಿದೆ.
ಸುಮಾರು 1,700 ಕೋಟಿ ರೂಪಾಯಿ ಮೊತ್ತದ ತೆರಿಗೆ ಪಾವತಿಸುವಂತೆ ವಿರೋಧ ಪಕ್ಷ ಕಾಂಗ್ರೆಸ್‌ಗೆ ಆದಾಯ ತೆರಿಗೆ (ಐಟಿ) ಇಲಾಖೆಯು ನೋಟಿಸ್ ಜಾರಿ ಮಾಡಿದ್ದು, ಇದರಿಂದ ಕಾಂಗ್ರೆಸ್‌ಗೆ ಆಘಾತ ಉಂಟಾಗಿದೆ. ನಾಲ್ಕು ವರ್ಷಗಳ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಈ ನೋಟಿಸ್ ಬಂದಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ.
ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ 1700 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿರುವ ಬಗ್ಗೆ ಕಾಂಗ್ರೆಸ್ ಮುಖಂಡ ವಿವೇಕ್ ಟಂಖಾ ಮಾಹಿತಿ ನೀಡಿದ್ದಾರೆ. ಈ ಸೂಚನೆಯನ್ನು 2017-18 ಮತ್ತು 2020-21 ಮೌಲ್ಯಮಾಪನ ವರ್ಷಗಳಿಗೆ ನೀಡಲಾಗಿದೆ. ಇದು ದಂಡದ ಮೊತ್ತ ಮತ್ತು ಬಡ್ಡಿಯನ್ನು ಸಹ ಒಳಗೊಂಡಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಇತರ ಮೂರು ಮೌಲ್ಯಮಾಪನ ವರ್ಷಗಳ ಆದಾಯದ ಮರುಮೌಲ್ಯಮಾಪನವನ್ನೂ ಎದುರುನೋಡುತ್ತಿದ್ದು, ಇದರ ಗಡುವು ಭಾನುವಾರಕ್ಕೆ ಕೊನೆಗೊಳ್ಳಲಿದೆ ಅನ್ನೋದು ಗಮನಾರ್ಹ.
ಗುರುವಾರ ದೆಹಲಿ ಹೈಕೋರ್ಟ್ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡಿತ್ತು. ನಾಲ್ಕು ವರ್ಷಗಳ ಅವಧಿಗೆ ತೆರಿಗೆ ಅಧಿಕಾರಿಗಳು ತಮ್ಮ ವಿರುದ್ಧ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿತ್ತು. ಇದು ನಡೆದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.