ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಹುಣಸಗಿ: ಕುಡಿಯುವ ನೀರಿನ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಣಸಗಿ ಪಟ್ಟಣದಲ್ಲಿ ಮಾ. 27ರ ಬುಧವಾರ ರಾತ್ರಿ ನಡೆದಿದೆ.
ನಂದಕುಮಾರ ಕಟ್ಟಿಮನಿ (21)ಕೊಲೆಯಾದ ಯುವಕ.
ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಘಟನೆ ವಿಕೋಪಕ್ಕೆ ತಿರುಗಿ ನಂದಕುಮಾರ ಕಟ್ಟಿಮನಿ ಎಂಬ ಯುವಕನನ್ನು ಹಣುಮಂತ ಎಂಬಾತ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ.

ತೀವ್ರ ಗಾಯಗೊಂಡವನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕುಡಿಯುವ ನೀರಿನ ವಿಚಾರಕ್ಕೆ ನೆರೆಯ ಸಂಬಂಧಿಕರು ಕೊಲೆಯಾದ ಯುವಕನ ಅಜ್ಜಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಎರಡು ಮನೆಯ ನಡುವೆಯಿದ್ದ ನಳ್ಳಿಯಿಂದ ನೀರು ತುಂಬಿಕೊಳ್ಳಲು ಹೋದಾಗ ಅಜ್ಜಿಯೊಂದಿಗೆ ಜಗಳ ಮಾಡಿಕೊಂಡಿದ್ದರು. ಅಜ್ಜಿಯೊಂದಿಗೆ ಜಗಳ ಮಾಡುತ್ತಿದ್ದನ್ನು ಕಂಡ ಮೊಮ್ಮಗ ನಂದಕುಮಾರ ಪ್ರಶ್ನಿಸಲು ಮುಂದಾದಾಗ ಈ ವೇಳೆ ಹನುಮಂತ ಚಾಕುವಿನಿಂದ ಇರಿದ್ದಾನೆ ಎಂದು ಶರಣಮ್ಮ ಯಮನಪ್ಪ ಕಟ್ಟಿಮನಿ ಅವರು ನೀಡಿದ ದೂರಿನನ್ವಯ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್‌ಪಿ ಜಿ.ಸಂಗೀತಾ ತಿಳಿಸಿದ್ದಾರೆ.
ಎಸ್‌ಪಿ ಭೇಟಿ: ಸುದ್ದಿ ತಿಳಿದ ನಂತರ ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಭೇಟಿ ನೀಡಿ ಪರಿಶೀಲಿಸಿ ವರದಿ ಪಡೆದುಕೊಂಡರು.
ಈ ವೇಳೆ ಡಿವೈಎಸ್‌ಪಿ ಜಾವಿದ್ ಇನಾಮದಾರ, ಸಿಪಿಐ ಸಚಿನ್ ಚಲವಾದಿ ಹಾಗೂ ಪಿಎಸ್‌ಐ ಸಂಗೀತಾ ಶಿಂಧೆ ಇದ್ದರು.
Laxmi News 24×7