Breaking News

ಐಪಿಎಲ್ ಬೆಟ್ಟಿಂಗ್ ಹುಚ್ಚಿಗೆ ಕೋಟಿ ಸಾಲ ಮಾಡಿದ ಪತಿ! ಸಾಲಗಾರರ ಹಿಂಸೆಗೆ ಮಸಣ ಸೇರಿದ ಪತ್ನಿ

Spread the love

ಚಿತ್ರದುರ್ಗ: ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬ ಮಾತನ್ನು ಕೇಳಿರುತ್ತೇವೆ. ಇಲ್ಲ ಕಣ್ಣಾರೆ ಸಹ ನೋಡಿರುತ್ತೇವೆ. ಇಲ್ಲಿಯೂ ಅಂತಹದ್ದೇ ದುರ್ಘಟನೆ ಸಂಭವಿಸಿದೆ. ಪತಿಯ ಬೆಟ್ಟಿಂಗ್ (Cricket Betting) ಗೀಳಿಗೆ ಪತ್ನಿ ದುರಂತ ಅಂತ್ಯ ಕಂಡಿದ್ದಾಳೆ. ಆನ್ ಲೈನ್ ಬೆಟ್ಟಿಂಗ್ ದಂಧೆಯಲ್ಲಿ ಕರ್ನಾಟಕದ (Karnataka) ನಿವಾಸಿ ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದಾನೆ.

ಪತಿಯ ಸಾಲದಿಂದ ಪ್ರತಿನಿತ್ಯ ಆಕೆಯೂ ನರಕ ಕಂಡಿದ್ದಾಳೆ. ಕೊನೆಗೆ ಸಾಲಗಾರರ ಕಿರುಕುಳ ತಾಳಲಾರದೆ ಮನನೊಂದ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

 

ಸಾಲಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ರಾಜ್ಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಆಗಿರುವ ದರ್ಶನ್ ಬಾಬು ಆನ್‌ಲೈನ್ ಬೆಟ್ಟಿಂಗ್‌ನಲ್ಲಿ 1 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಸಾಲ ಮಾಡಿ ಬೆಟ್ಟಿಂಗ್ ಆಡಿದ್ದದ್ದರಿಂದ, ಸಾಲಗಾರರು ನಿರಂತರ ಆತನ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ. ಸಾಲಗಾರರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಕಾರಣ ದರ್ಶನ್ ಪತ್ನಿ 24 ವರ್ಷದ ರಂಜಿತಾ ಬೇಸತ್ತು ಮಾರ್ಚ್ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಟ್ಟಿಂಗ್​ಗಾಗಿ ಸಾಲ

ಪೊಲೀಸರ ಮಾಹಿತಿ ಪ್ರಕಾರ, ದರ್ಶನ್ ಬಾಬು ಮತ್ತು ರಂಜಿತ 2020ರಲ್ಲಿ ವಿವಾಹವಾಗಿದ್ದರು. 2021ರಲ್ಲಿ ಪತಿಯ ಬೆಟ್ಟಿಂಗ್ ಚಟದ ಬಗ್ಗೆ ರಂಜಿತಾ ತಿಳಿದುಕೊಂಡಿದ್ದಾರೆ. ಮೃತ ರಂಜಿತಾ ಅವರ ತಂದೆ ವೆಂಕಟೇಶ್ ನೀಡಿರುವ ದೂರಿನಲ್ಲಿ , ದರ್ಶನ್​​ಗೆ ಸಾಲ ಕೊಟ್ಟವರು ನೀಡುತ್ತಿದ್ದ ಕಿರುಕುಳದಿಂದಲೇ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ಎಂದು ಉಲ್ಲೇಖಿಸಿದ್ದಾರೆ.

ಪತ್ರ ಬರೆದಿಟ್ಟು ಆತ್ಮಹತ್ಯೆ

ಜನರ ಬಳಿ ಸಾಲ ಪಡೆಯುವಾಗ ಖಾಲಿ ಚೆಕ್ ನೀಡಿ ದರ್ಶನ್ ಹಣ ಪಡೆದಿದ್ದಾನೆ. ಸಾಲಗಾರರು ಪ್ರತಿನಿತ್ಯ ಮನೆ ಬಳಿ ಬಂದು ಗಲಾಟೆ ಮಾಡಿ ದಂಪತಿಗೆ ಬೆದರಿಕೆ ಹಾಕಿದ್ದಾರೆ. ಇದೆಲ್ಲದರಿಂದ ಒತ್ತಡಕ್ಕೀಡಾಗಿದ್ದ ರಂಜಿತಾ ಜೀವನವೇ ಬೇಡ ಎಂಬ ನಿರ್ಧಾರ ತೆಗೆದುಕೊಂಡಿದ್ದಾರೆಂದು ರಂಜಿತಾ ತಂದೆ ದೂರಿನಲ್ಲಿ ತಿಳಿಸಿದ್ದಾರೆಂದು ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.

ರಂಜಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪತ್ರ ಬರೆದಿಟ್ಟಿದ್ದಾರೆ. ಅದರಲ್ಲಿ ತನಗೂ, ತನ್ನ ಪತಿಗೂ ಸಾಲಗಾರರು ನೀಡುತ್ತಿದ್ದ ಕಿರುಕುಳ ಬಗ್ಗೆ ವಿವರಿಸಿದ್ದಾರೆ. ಆಕೆಯ ತಂದೆಯ ದೂರಿನನ್ವಯ ಪೊಲೀಸರು ಸುಮಾರು 13 ಮಂದಿ ವಿರುದ್ಧ IPC 306 ಅಡಿ ದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಶಿವು, ಗಿರೀಶ್ ಹಾಗೂ ವೆಂಕಟೇಶ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

13 ಮಂದಿ ವಿರುದ್ಧ ಎಫ್​ಐಆರ್

ನಮ್ಮ ತನಿಖೆಯ ಪ್ರಕ್ರಿಯೆಯಲ್ಲಿ, ದರ್ಶನ್ ಬಾಬು ಸಾಲಗಾರರಿಂದ 84 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡಿರುವುದು ನಮಗೆ ಕಂಡುಬಂದಿದೆ. ಈ ಹಣವನ್ನು 2021-2023ರ ನಡುವೆ ನಡೆದ ಐಪಿಎಲ್ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ. ನಾವು 13 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಮೂವರನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.

ನವೆಂಬರ್ 2023 ರಲ್ಲಿ, ಬೆಂಗಳೂರು ಪೊಲೀಸ್ ಸೈಬರ್ ಕ್ರೈಮ್ ಬ್ರಾಂಚ್ ಅಂತರರಾಜ್ಯ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಭೇದಿಸಿತು. ಬೆಟ್ಟಿಂಗ್ ದಂಧೆಯ ಆರೋಪಿಗಳು ಸೈಬರ್ ವಂಚನೆಗಾಗಿ ಹಲವು ಖಾತೆಗಳನ್ನು ತೆರೆದಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಲ್ಲಿ ಐವರು ಕೇರಳದವರು ಮತ್ತು ಒಬ್ಬ ಕರ್ನಾಟಕ ಆರೋಪಿಯಾಗಿದ್ದ. ಪೊಲೀಸರು ತನಿಖೆ ವೇಳೆ ಆರೋಪಿಗಳು ಅಮಾಯಕರ ಹೆಸರಿನಲ್ಲಿ 126 ಬ್ಯಾಂಕ್ ಖಾತೆಗಳನ್ನು ತೆರೆದಿರುವುದು ಪತ್ತೆಯಾಗಿತ್ತು.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ