ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರಿಗೆ ಇಂದು ಯಶಸ್ವಿಯಾಗಿ ಹೃದಯ ಶಸ್ತ್ರ ಚಿಕಿತ್ಸೆ (Heart Surgery) ನಡೆಸಲಾಗಿದೆ. ಚೆನ್ನೈನ (Chennai) ಅಪೊಲೊ ಆಸ್ಪತ್ರೆಯಲ್ಲಿ (Apollo Hospital) ಎಚ್ಡಿಕೆಗೆ ಚಿಕಿತ್ಸೆ ಮುಂದುವರೆದಿದ್ದು, ಮಾರ್ಚ್ 25ಕ್ಕೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪಾಂಡವಪುರದಲ್ಲಿ ಮಾಹಿತಿ ನೀಡಿರುವ ಮಾಜಿ ಸಚಿವ ಸಿಎಸ್ ಪುಟ್ಟರಾಜು, ಕುಮಾರಸ್ವಾಮಿ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಆಗಿದೆ. ಅಭಿಮಾನಿಗಳ ಪ್ರಾರ್ಥನೆ ಹಾಗೂ ದೇವೇಗೌಡ, ಚನ್ನಮ್ಮ ಅವರ ಆಶೀರ್ವಾದ ಕುಮಾರಣ್ಣ ಮೇಲಿದೆ. ಯಾವುದೇ ತೊಂದರೆ ಇಲ್ಲದಂತೆ ಕುಮಾರಣ್ಣ ಗುಣಮುಖರಾಗಿದ್ದಾರೆ. ಇನ್ನ ಮೂರ್ನಾಲ್ಕು ದಿನಗಳಲ್ಲಿ ಕುಮಾರಣ್ಣ ವಾಪಸ್ ಆಗಲಿದ್ದಾರೆ. ನಮ್ಮ ಜಿಲ್ಲೆಯ ಎಲ್ಲಾ ನಾಯಕರು ಚಲುವನಾರಾಯಣಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ ಕುಮಾರಣ್ಣ ಗುಣಮುಖರಾಗಲಿದ್ದಾರೆ ಎಂದು ತಿಳಿಸಿದರು.
ಕುಮಾರಣ್ಣನೇ ಮಂಡ್ಯ ಅಭ್ಯರ್ಥಿ
ನೂರಕ್ಕೆ ನೂರು ಕುಮಾರಣ್ಣನೇ ಮಂಡ್ಯ ಎನ್ಡಿಎ ಅಭ್ಯರ್ಥಿ ಎಂದು ಇದೇ ವೇಳೆ ಸಿಎಸ್ ಪುಟ್ಟರಾಜು ತಿಳಿಸಿದ್ದು, ನಾನೇ ನಿಂತು ಕುಮಾರಣ್ಣ ಚುನಾವಣೆ ಮಾಡಲಿದ್ದೇನೆ. ಅತ್ಯಂತ ಪ್ರಚಂಡವಾಗಿ ಅವರನ್ನ ಗೆಲ್ಲಿಸಲಿದ್ದೇವೆ. ಕುಮಾರಣ್ಣ ಅರ್ಜಿ ಹಾಕಿದರೆ ಸಾಕು ಚುನಾವಣೆ ನಾವು ಮಾಡ್ತೇವೆ. ದೇವೇಗೌಡರ ಆಶೀರ್ವಾದ, ಮೋದಿಯವರ ಸಹಕಾರದಿಂದ ಅತ್ಯಂತ ಬಹುಮತದಿಂದ ಗೆಲ್ಲಲಿದ್ದೇವೆ. ಕೋಲಾರ, ಮಂಡ್ಯ, ಹಾಸನ ಸೇರಿದಂತೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ. ಸಣ್ಣಪುಟ್ಟ ವ್ಯತ್ಯಸಗಳನ್ನ ಬಗೆ ಹರಿಸುವುದಾಗಿ ಬಿವೈ ವಿಜಯೇಂದ್ರ ತಿಳಿಸಿದ್ದಾರೆ ಎಂದು ಹೇಳಿದರು.