ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬಂದು ಪುನಃ ಬಿಜೆಪಿಗೆ ವಾಪಸ್ಸು ಹೋದ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ತಾನು ಮಾಡಿದ ಪ್ರಮಾದಕ್ಕೆ ಪಾಠ ಕಲಿಸುವ ಯೋಜನೆ ಬಿಜೆಪಿ ನಾಯಕರಿಗಿದೆಯೇ?
ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳುವ ಪ್ರಕಾರ ಶೆಟ್ಟರ್ ಅವರನ್ನು ಹರಕೆಯ ಕುರಿ ಮಾಡಲು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ (Belagavi Lok Sabha seat) ಕಣಕ್ಕಿಳಿಸುವ ಹುನ್ನಾರ ನಡೆದಿದೆ.
ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸವದಿ, ಶೆಟ್ಟರ್ ಅವರಿಗೆ ಉದ್ದೇಶಪೂರ್ವಕವಾಗಿ ಬೆಳಗಾವಿ ಕರೆತಂದು ಸೋಲಿಸುವ ಪ್ರಯತ್ನ ಬಿಜೆಪಿ ನಾಯಕರಿಂದ ನಡೆಯುತ್ತಿದೆ. ಶೆಟ್ಟರ್ ಅವರಿಗೆ ಟಿಕೆಟ್ ಸಿಗಲಿಲ್ಲವೆಂಬ ಹಪಾಹಪಿ ಇರಬಾರದು,
ಮತ್ತು ಅವರು ಗೆದ್ದು ಸಂಸತ್ ಪ್ರವೇಶಿಸಬಾರದು, ಸೋತು ಸುಣ್ಣವಾಗಿ ಮನೆಯಲ್ಲಿ ಕೂರುವಂತಾಗಬೇಕು-ಇದು ಬಿಜೆಪಿ ನಾಯಕರು ಶೆಟ್ಟರ್ ಅವರಿಗಾಗಿ ತೋಡಿರುವ ಖೆಡ್ಡಾ ಎಂದು ಸವದಿ ಹೇಳಿದರು.
ಯಾವ ಕುರಿಯನ್ನು ಎಲ್ಲಿ ನಿಲ್ಲಿಸಬೇಕು ಹೇಗೆ ಅದನ್ನು ಬಲಿ ಕೊಡಬೇಕು ಅಂತ ಬಿಜೆಪಿ ನಾಯಕರು ಶಿಸ್ತುಬದ್ಧವಾಗಿ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಿದ ಸವದಿ, ಶೆಟ್ಟರ್ ಏಕಾಏಕಿ ಪಕ್ಷ ಬಿಟ್ಟರು, ಏಕಾಏಕಿಯಾಗಿ ವಾಪಸ್ಸು ಹೋದರು ಮತ್ತು ಏಕಾಏಕಿಯಾಗಿ ಸೋಲುವುದು ಕೂಡ ನಿಶ್ಚಿತ ಎಂದರು.