ಬೆಂಗಳೂರು, ಮಾರ್ಚ್.18: ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ (Drinking Water Crisis) ಹಿನ್ನೆಲೆ ಇಂದು ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಮಹತ್ವದ ಸಭೆ ನಡೆಸಲಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ. ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಆಗಮಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರು ನಗರ ಡಿಸಿ, ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಮಾ.5ರಂದು ರಾಜ್ಯದ ನೀರಿನ ಸಮಸ್ಯೆ ಕುರಿತು ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಇಂದು ಬೆಂಗಳೂರು ನಗರ ಭಾಗಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ನೀರಿನ ಸಮಸ್ಯೆ ಪರಿಹಾರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಖಾಸಗಿ ಟ್ಯಾಂಕರ್ ಮಾಲೀಕರ ಸುಲಿಗೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಮೊದಲ ಬಾರಿ ಸಿಎಂ ಸಭೆ ಬಳಿಕ ಸುಲಿಗೆಗೆ ಬ್ರೇಕ್ ಹಾಕಲಾಗಿತ್ತು. ಮಾ.7ರಂದು ಟ್ಯಾಂಕರ್ ನೀರಿನ ದರ ನಿಗದಿಪಡಿಸಿ ಆದೇಶ ಮಾಡಲಾಗಿತ್ತು. ಬೆಂಗಳೂರು ನಗರದಲ್ಲಿ ಸುಮಾರು 3,500 ಖಾಸಗಿ ಟ್ಯಾಂಕರ್‌ಗಳಿವೆ. ಖಾಸಗಿ ಟ್ಯಾಂಕರ್‌ಗಳ ಬಹುತೇಕ ಮಾಲೀಕರು ಪರವಾನಗಿ ಪಡೆದಿಲ್ಲ.
ಹೀಗಾಗಿ ಮಾ.1ರಿಂದ 7ರೊಳಗೆ ಸ್ವಯಂ ನೋಂದಣಿಗೆ ಸೂಚಿಸಲಾಗಿತ್ತು. ಇಂದಿನ ಸಭೆಯಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಮಾಹಿತಿ ಪಡೆಯಲಿದ್ದಾರೆ. ಜೊತೆಗೆ ಕಾವೇರಿ 5ನೇ ಹಂತದ ಮುಕ್ತಾಯ ಹಂತದ ಮಾಹಿತಿ ಸಂಗ್ರಹಿಸಲಿದ್ದಾರೆ. ನೀರಿನ ಸಮಸ್ಯೆ ಪರಿಹಾರ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆ.