ಬೆಂಗಳೂರು,ಮಾ.16- ಇಂಡಿಯಾ ರಾಜಕೀಯ ಮೈತ್ರಿಕೂಟದ ನಡುವೆ ಯಾವುದೇ ಗೊಂದಲಗಳಿಲ್ಲ. ಕ್ಷೇತ್ರಗಳ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಬಹುತೇಕ ಮಾ.17 ಅಥವಾ 18 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟ ಲೋಕಸಭೆಯ 543 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ. ಕೆಲವು ಕಡೆ ನಮಗೆ ಬೇಕಾದ ಕ್ಷೇತ್ರವನ್ನು ಅವರು ಕೇಳುತ್ತಾರೆ. ಅವರಿಗೆ ಬೇಕಾದ ಕ್ಷೇತ್ರಗಳನ್ನು ನಾವು ಕೇಳುತ್ತಿದ್ದೇವೆ. ಹೀಗಾಗಿ ಚರ್ಚೆಗಳು ಚಾಲನೆಯಲ್ಲಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್‍ಗೆ 10 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಉತ್ತರ ಪ್ರದೇಶದಲ್ಲೂ ಈಗಾಗಲೇ ಒಪ್ಪಂದವಾಗಿದೆ.
ಆಪ್ ಪಕ್ಷ ದೆಹಲಿಯಲ್ಲಿ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಸಣ್ಣಪುಟ್ಟ ಸಮಸ್ಯೆಗಳನ್ನು ಚರ್ಚೆ ಮೂಲಕ ಬಗೆಹರಿಸಿದ್ದೇವೆ. ಮಹಾರಾಷ್ಟ್ರಕ್ಕೆ ಕಾಂಗ್ರೆಸ್ ನಾಯಕರು ತೆರಳಿದ್ದು, ಕ್ಷೇತ್ರಗಳ ಹೊಂದಾಣಿಕೆ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಮೋದಿಯವರು 400 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ, ಮೋದಿ ಇದ್ದ ಮೇಲೆ ಎಲ್ಲವೂ ಸಾಧ್ಯ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೂ ಚುನಾವಣೆಯಲ್ಲಿ ಮಾತ್ರ ಪರದಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಇಂಡಿಯಾ ಮೈತ್ರಿಕೂಟಗಳ ನಡುವೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ನಿರ್ಧಾರವಾದರೆ ಅದನ್ನೂ ಅಳವಡಿಸಿಕೊಂಡು ಚುನಾವಣೆಯಲ್ಲಿ ದೇಶಾದ್ಯಂತ ಪ್ರಚಾರ ಮಾಡುವುದಾಗಿ ತಿಳಿಸಿದರು.