ಬೆಳಗಾವಿ: ಕಾಂಗ್ರೆಸ್‌ನಿಂದ ಬೆಳಗಾವಿ ಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರ ಮೃಣಾಲ್‌ಗೆ ಟಿಕೆಟ್ ಖಾತ್ರಿಯಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಮೃಣಾಲ್ ಹೆಸರು ಅಂತಿಮ ಆಗುತ್ತಿದ್ದಂತೆಯೇ ಬಿಜೆಪಿ ನಾಯಕರು ‘ಜಾತಿ’ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಸೇರಿದ ಮೃಣಾಲ್ ವಿರುದ್ಧ ಪಂಚಮಸಾಲಿ ಅಭ್ಯರ್ಥಿಯನ್ನೇ ನಿಲ್ಲಿಸಬೇಕು ಎಂಬುದು ಒಂದು ಗುಂಪಿನ ಬೇಡಿಕೆ. ಇದಕ್ಕೆ ಪೂರಕವಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ ಪ್ರಬಲ ಆಕಾಂಕ್ಷಿ ಆಗಿದ್ದಾರೆ.
ಬೆಳಗಾವಿ ಲೋಕಸಭೆ ವ್ಯಾಪ್ತಿಯ ಬೆಳಗಾವಿ, ಬೈಲಹೊಂಗಲ, ಗೋಕಾಕ, ಸವದತ್ತಿ, ರಾಮದುರ್ಗ, ಮೂಡಲಗಿ ತಾಲ್ಲೂಕುಗಳಲ್ಲಿ ಪಂಚಮಸಾಲಿ ಸಮುದಾಯದ ಸಂಖ್ಯೆ ದೊಡ್ಡದು ಎಂಬ ಲೆಕ್ಕಾಚಾರವೂ ಇದೆ.