ಬೆಂಗಳೂರು: ‘ಇಷ್ಟು ವರ್ಷಗಳ ಕಾಲ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್- ಜೆಡಿಎಸ್ ಮಧ್ಯೆ ಸ್ಪರ್ಧೆ ಇತ್ತು. ಈಗ ಎಚ್.ಡಿ. ದೇವೇಗೌಡರ ಕುಟುಂಬವೇ ಬಿಜೆಪಿ ಸೇರಿರುವುದರಿಂದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ನತ್ತ ಬರುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣಾ ಸಿದ್ಧತೆ ಕುರಿತು ಕ್ಷೇತ್ರದ ವ್ಯಾಪ್ತಿಯ ಶಾಸಕರು, ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಮತ್ತು ಪ್ರಮುಖ ಮುಖಂಡರ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಜೆಡಿಎಸ್ ನಾಯಕರ ನಿರ್ಧಾರದಿಂದ ಆತಂಕಗೊಂಡಿರುವ ಆ ಪಕ್ಷದ ಕಾರ್ಯಕರ್ತರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಹಳೆಯ ಘಟನೆಗಳನ್ನು ಮರೆತು ಎಲ್ಲರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ಸೂಚನೆ ನೀಡಿದ್ದೇನೆ’ ಎಂದರು.
‘ಜೆಡಿಎಸ್ ಇದೆಯಾ ಎಂಬುದನ್ನು ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ನೋಡಿಕೊಳ್ಳಲಿ. ಆ ಬಳಿಕ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ’ ಎಂದು ಹೇಳಿದರು.
‘ಜೆಡಿಎಸ್‌ನಿಂದಲೇ ಸ್ಪರ್ಧಿಸಬೇಕಿತ್ತು’: ಸಂಸದ ಡಿ.ಕೆ. ಸುರೇಶ್ ಮಾತನಾಡಿ, ‘ನಾನು ಕೆಲಸ ಮಾಡಿದ್ದೇನೆ. ಹೀಗಾಗಿ ಜನರ ಬಳಿ ಕೂಲಿ ಕೇಳುತ್ತಿದ್ದೇನೆ. ಡಾ.ಸಿ.ಎನ್. ಮಂಜುನಾಥ್ ಅವರು ಪ್ರಬಲ ಅಭ್ಯರ್ಥಿಯಾಗಿದ್ದರೆ ಜೆಡಿಎಸ್ ಚಿಹ್ನೆಯ ಅಡಿಯಲ್ಲೇ ಸ್ಪರ್ಧಿಸಬೇಕಿತ್ತು’ ಎಂದರು.