ಬೆಂಗಳೂರು: ಲೋಕಸಭಾ ಚುನಾ ವಣೆಯ ಹೊಸ್ತಿಲಲ್ಲಿ ಬಿಜೆಪಿ ವಿರುದ್ಧ ಮತ್ತೂಂದು ತನಿಖಾಸ್ತ್ರ ಬಳಕೆಗೆ ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಪಿಎಸ್‌ಐ ನೇಮಕ ಹಗರಣದ ಬಗ್ಗೆ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚಿಸಿ ತನಿಖೆ ನಡೆಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಿಎಂ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯವೂ ಸೇರಿ ಒಟ್ಟು 48 ವಿಷಯಗಳಿಗೆ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ವರದಿಯಲ್ಲಿ ಏನಿತ್ತು?
ಪಿಎಸ್‌ಐ ನೇಮಕ ಹಗರಣದಲ್ಲಿ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳ ಸಹಿತ 113 ಜನರ ಪಾತ್ರ ಇರುವುದನ್ನು ತನಿಖೆಗೆ ಸರಕಾರ ನೇಮಕ ಮಾಡಿದ್ದ ನ್ಯಾ| ಬಿ. ವೀರಪ್ಪ ನೇತೃತ್ವದ ಸಮಿತಿ ನೀಡಿದ ವರದಿಯಲ್ಲಿ ಪತ್ತೆ ಹಚ್ಚಲಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಿದ ಕೆಲವು ಪ್ರಭಾವಿಗಳು ಆಯೋಗ ನೀಡಿದ ಸಮನ್ಸ್‌ಗೆ ಉತ್ತರ ನೀಡಿಲ್ಲ. ಖುದ್ದು ಹಾಜರಾಗಿ ಹೇಳಿಕೆಯನ್ನೂ ದಾಖಲಿಸಿಲ್ಲ. ಪ್ರಕರಣದ ಸ್ವರೂಪ ಗಂಭೀರವಾಗಿರುವುದರಿಂದ ಇವರೆಲ್ಲರಿಂದ ಮಾಹಿತಿ ಪಡೆಯುವುದು ಅನಿವಾರ್ಯ ಎಂದು ತನಿಖಾ ಸಂಸ್ಥೆ ಶಿಫಾರಸು ಮಾಡಿದೆ.
ಸಮಿತಿಯ ಶಿಫಾರಸಿನಲ್ಲಿ ಅಕ್ರಮದ ಬಗ್ಗೆ ಮುಂದುವರಿದ ತನಿಖೆ ಅಗತ್ಯವಿದೆ ಎಂದು ಅಭಿಪ್ರಾಯಪಡಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.