ಹೊಸಪೇಟೆ (ವಿಜಯನಗರ): ಹಂಪಿ ಸುತ್ತಮುತ್ತ ಈಗಾಗಲೇ ಹಲವು ಶಾಸನಗಳು ದೊರೆತು ಪ್ರಕಟವಾಗಿದ್ದರೆ, ಇನ್ನಷ್ಟು ಶಾಸನಗಳು ಬೆಳಕಿಗೆ ಬರುತ್ತಲೇ ಇವೆ. ವಿಜಯನಗರ ತಿರುಗಾಟ ತಂಡವು ಇದೀಗ ಪತ್ತೆಹಚ್ಚಿದ ಶಾಸನ ‘ವಿರೂಪಾಕ್ಷದೇವಪುರ’ ಎಂಬ ಹೆಸರು ಊರೊಂದಕ್ಕೆ ಇದ್ದುದನ್ನು ಕಂಡುಕೊಂಡಿದೆ.
ಹಂಪಿ ಸಮೀಪದ ನಾಗೇನಹಳ್ಳಿಯ ಧರ್ಮರಗುಡ್ಡದ ಬಳಿಯ ಉತ್ತರ ದಿಕ್ಕಿನ ಜಮೀನೊಂದರಲ್ಲಿರುವ ಕರಿಯಮ್ಮ ದೇವಾಲಯದ ಕಂಬದಲ್ಲಿನ ಶಾಸನ ಈವರೆಗೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಶಾಸನದ ಮೇಲ್ಬಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ. ‘ಶ್ರೀ ವಿರೂಪಾಕ್ಷ ದೇವರಪುರ’ ಎಂಬ ಮೂರು ಸಾಲುಗಳು ಬಿಟ್ಟರೆ ಬೇರೆ ಏನೂ ಉಲ್ಲೇಖವಾಗಿಲ್ಲ.
‘ಈ ಶಾಸನದಿಂದ ಆ ಭಾಗವು ‘ಶ್ರೀ ವಿರೂಪಾಕ್ಷ ದೇವರ ಪುರ’ ಎಂದು ಕರೆಯಲ್ಪಡುತ್ತಿತ್ತು ಎಂಬುದು ತಿಳಿದುಬರುತ್ತದೆ. ಸಂಗಮ, ಸಾಳ್ವ ವಂಶದ ಕಾಲಾವಧಿಯಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ‘ಶ್ರೀ ವಿರೂಪಾಕ್ಷ’ ಎಂಬ ಅಕ್ಷರ ನಮೂದಿತವಾಗಿತ್ತು. ಹರಿಹರ ಕವಿಯು ‘ಹಂಪಿಯನ್ನು ಆಳಿದವ ವಿರೂಪಾಕ್ಷ’ ಎಂದು ಕೃತಿಗಳಲ್ಲಿ ಉಲ್ಲೇಖಿಸಿದ್ದಾನೆ. ಇದು ಬಿಟ್ಟರೆ ವಿರೂಪಾಕ್ಷ ಎಂಬ ಉಲ್ಲೇಖ ಸಿಕ್ಕಿದ್ದು ವಿರಳ. ಹೀಗಾಗಿ ಈ ಕರಿಯಮ್ಮ ದೇವಾಲಯವು ಸಂಗಮ ಇಲ್ಲವೇ ಸಾಳ್ವ ವಂಶದ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿರಬೇಕು, ಇದು ಮೊದಲಿಗೆ ಶಿವ ದೇವಾಲಯವಾಗಿರಬೇಕು’ ಎಂದು ತಂಡದ ಸದಸ್ಯ ಪ್ರೊ.ಗೋವಿಂದ ತಿಳಿಸಿದ್ದಾರೆ.
ಅಪರೂಪದ ಎರಡು ವೀರಗಲ್ಲು ಪತ್ತೆ: ನಾಗೇನಹಳ್ಳಿ ಸಮೀಪದ ಬಸವನದುರ್ಗಾದಲ್ಲಿ (ಗುಡಿ ಓಬಳಾಪುರ) ಎರಡು ವೀರಗಲ್ಲುಗಳನ್ನು ಸಹ ಈ ತಂಡ ಪತ್ತೆಹಚ್ಚಿದೆ.
‘ಊರಿಗೆ ನುಗ್ಗಿ ಕಳ್ಳತನಕ್ಕೆ ಮುಂದಾದ ಕಳ್ಳರು ಅಲ್ಲಿನ ದೇವರ ಶಾಪದಿಂದಾಗಿ ಕಲ್ಲಾಗಿರುವರೆಂದು ಸ್ಥಳೀಯರು ನಂಬಿದ್ದಾರೆ. ಒಂದು ವೀರಗಲ್ಲಿನ ಮೇಲುಭಾಗದಲ್ಲಿ ಮೂರು ಸಾಲಿನ ಶಾಸನ ಲಿಪಿಯ ಅಕ್ಷರಗಳಿವೆ, ಅವು ಸವೆದು ಹೋಗಿವೆ. ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿರುವ ಈ ವೀರಗಲ್ಲು, ತುಂಬಾ ವಿಶೇಷ ಹಾಗೂ ವಿಭಿನ್ನವಾಗಿವೆ’ ಎಂದು ತಂಡದ ಸದಸ್ಯ ಪ್ರೊ.ತಿಪ್ಪೇಸ್ವಾಮಿ ಹೇಳಿದ್ದಾರೆ.
ಕೃಷಿಗಾಗಿ ಇಲ್ಲವೇ ಭೂಮಿಗಾಗಿ ಕಾದಾಟ ನಡೆದಿರಬೇಕೆಂದೂ, ಆ ಹೋರಾಟದಲ್ಲಿ ಒಬ್ಬ ವೀರ ಮರಣ ಹೊಂದಿರುವ ಕಾರಣದಿಂದ ವೀರಗಲ್ಲು ಕೆತ್ತಿರಬೇಕೆಂದೂ ಚಿತ್ರಗಳಿಂದ ತಿಳಿಯಬಹುದಾಗಿದೆ.
ಮೊದಲ ವೀರಗಲ್ಲಿನಲ್ಲಿ ನೇಗಿಲನ್ನು ಮೇಲಕ್ಕೆ ಎತ್ತಿ ಹಿಡಿದ ವ್ಯಕ್ತಿಯ ಚಿತ್ರವಿದೆ. ಎರಡನೇ ಹಂತದಲ್ಲಿ ಇಬ್ಬರು ವೀರರು ಕಾದಾಟ ಮಾಡುವ ಚಿತ್ರವಿದ್ದು, ಒಬ್ಬ ಎಡಗೈನಲ್ಲಿ ಗುರಾಣಿಯನ್ನು ಹಿಡಿದರೆ, ಮತ್ತೊಬ್ಬ ಬಲಗೈನಲ್ಲಿ ಗುರಾಣಿ ಹಿಡಿದಿರುವಂತೆ ಕಾಣಸಿಗುತ್ತದೆ. ಮೂರನೇ ಹಂತದಲ್ಲಿ ಕಾದಾಟ ಮಾಡಿ ಮರಣವನ್ನಪ್ಪಿರಬೇಕು. ಪದ್ಮಾಸನದಲ್ಲಿ ಕುಳಿತ ಭಂಗಿಯಲ್ಲಿರುವ ವೀರನನ್ನು ಇಬ್ಬರು ದೇವದೂತರು ಹಿಡಿದುಕೊಂಡು ಕರೆದೊಯ್ಯುವ ಚಿತ್ರವನ್ನು ತುಂಬಾ ಸುಂದರವಾಗಿ ಕೆತ್ತಿದ್ದಾರೆ.
ಇದರ ಪಕ್ಕದ ಇನ್ನೊಂದು ವೀರಗಲ್ಲಿನ ಮೊದಲ ಹಂತದಲ್ಲಿ ಕಾದಾಟ ಮಾಡುವ ಇಬ್ಬರು ವೀರರು, ಅವರ ಪಕ್ಕದಲ್ಲಿ ನೇಗಿಲು ಚಿಹ್ನೆಯ ಚಿತ್ರವಿದೆ. ಎರಡನೇ ಹಂತದಲ್ಲಿ ಇಬ್ಬರು ಸಖಿಯರು ಚಾಮರ ಬೀಸುತ್ತಿರುವ ಮತ್ತು ವೀರನನ್ನು ಕರೆದೊಯ್ಯುವ ಚಿತ್ರವನ್ನು ತುಂಬಾ ಸುಂದರವಾಗಿ ಕೆತ್ತಲಾಗಿದೆ. ಇಲ್ಲೂ ಲಿಪಿ ಇದ್ದುದು ಅಳಿಸಿ ಹೋಗಿದೆ. ಭೂಮಿಗಾಗಿ ಇಲ್ಲವೇ ಕೃಷಿಗಾಗಿ ಕಾದಾಟ ಮಾಡಿದವರ ಚಿತ್ರಗಳು ಇವುಗಳಾಗಿರಬೇಕು ಎಂದು ಅಂದಾಜಿಸಲಾಗಿದೆ.
ಸಂಶೋಧನಾ ತಂಡದಲ್ಲಿ ಸದಸ್ಯರಾದ ಗೋವರ್ಧನ, ಕೃಷ್ಣೇಗೌಡ, ರಾಮಾಂಜಿನೇಯ, ರವಿಕುಮಾರ, ಸ್ಥಳೀಯರಾದ ಚನ್ನಪ್ಪ, ಅಧ್ಯಾಪಕ ಪ್ರಭು, ವಕೀಲ ಷಣ್ಮುಖ ಇದ್ದರು.