ನವದೆಹಲಿ(ಮಾ.10): 2024 ರ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದಾರೆ. ಅರುಣ್ ಗೋಯಲ್ ಅವರ ರಾಜೀನಾಮೆಯನ್ನು ಅಧ್ಯಕ್ಷ ದ್ರೌಪದಿ ಮುರ್ಮು ಅವರು ಮಾರ್ಚ್ 9 ರ ಶನಿವಾರದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ಕಾನೂನು ಸಚಿವಾಲಯದ ಅಧಿಸೂಚನೆ ತಿಳಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಅನೂಪ್ ಪಾಂಡೆ ನಿವೃತ್ತಿ ಮತ್ತು ಈಗ ಅರುಣ್ ಗೋಯಲ್ ರಾಜೀನಾಮೆ ನಂತರ, ಮೂರು ಸದಸ್ಯರ ಚುನಾವಣಾ ಆಯೋಗವು ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಮಾತ್ರ ಹೊಂದಿದೆ.
ಅರುಣ್ ಗೋಯಲ್ ಅವರ ಅಧಿಕಾರಾವಧಿ ಡಿಸೆಂಬರ್ 5, 2027 ರವರೆಗೆ ಇತ್ತು. ರಾಜೀವ್ ಕುಮಾರ್ ಅವರ ಅಧಿಕಾರಾವಧಿ ಮುಂದಿನ ವರ್ಷ ಫೆಬ್ರವರಿವರೆಗೆ ಇದೆ. ಅವರ ನಂತರ, ಗೋಯಲ್ ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಲಿದ್ದಾರೆ. ಹೀಗಿರುವಾಗ ಗೋಯಲ್ ಅವರ ದಿಢೀರ್ ರಾಜೀನಾಮೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.
ಅರುಣ್ ಗೋಯಲ್ ರಾಜೀನಾಮೆ ಏಕೆ?
ಸದ್ಯ ಅರುಣ್ ಗೋಯಲ್ ರಾಜೀನಾಮೆಗೆ ಅಧಿಕೃತವಾಗಿ ಯಾವುದೇ ಕಾರಣ ನೀಡಿಲ್ಲ. ಆದಾಗ್ಯೂ, ಕೆಲವು ಮಾಧ್ಯಮ ವರದಿಗಳು ‘ವಿವಿಧ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು’ ಇವೆ ಎಂದು ಸೂಚಿಸಿವೆ ಮತ್ತು ಇದು ಅವರ ರಾಜೀನಾಮೆಗೆ ಕಾರಣವಾಗಿರಬಹುದು. ಆದರೆ ಎನ್‌ಡಿಟಿವಿ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿ ಅರುಣ್ ಗೋಯಲ್ ರಾಜೀನಾಮೆ ನೀಡುವ ಸಂದರ್ಭದಲ್ಲಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ.
ಗೋಯಲ್ ಅವರ ರಾಜೀನಾಮೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಕಳವಳಕಾರಿ ಎಂದು ಕಾಂಗ್ರೆಸ್ ಬಣ್ಣಿಸಿದೆ ಮತ್ತು ಈ ಬೆಳವಣಿಗೆಯ ಬಗ್ಗೆ ವಿವರಣೆಯನ್ನು ನೀಡಬೇಕು ಎಂದು ಹೇಳಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಎಕ್ಸ್’ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ‘ಭಾರತದಲ್ಲಿ ಈಗ ಒಬ್ಬರೇ ಚುನಾವಣಾ ಆಯುಕ್ತರಿದ್ದಾರೆ, ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಲಿದೆ. ಇಂತಹ ಸಂದರ್ಭದಲ್ಲಿ ಈ ನಡೆ ಏಕೆ?’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ‘ನಾನು ಮೊದಲೇ ಹೇಳಿದಂತೆ ನಮ್ಮ ಮುಕ್ತ ಸಂಸ್ಥೆಗಳ ವ್ಯವಸ್ಥಿತ ವಿನಾಶವನ್ನು ತಡೆಯದಿದ್ದರೆ ನಮ್ಮ ಪ್ರಜಾಪ್ರಭುತ್ವ ಸರ್ವಾಧಿಕಾರದ ಕೈವಶವಾಗುತ್ತದೆ ಎಂದಿದ್ದಾರೆ.