ಕನಕಪುರ: ಆಸ್ತಿಗಾಗಿ ನಿಂಗಪ್ಪ ಎಂಬುವರನ್ನು ಅಪಹರಿಸಿ ಕೊಲೆ ಮಾಡಿ, ಶವವನ್ನು ಸುಟ್ಟು ಹಾಕಿದ್ದ ಆತನ ಪತ್ನಿ, ಮೂವರು ಮಕ್ಕಳು, ನಾಲ್ವರು ಸುಪಾರಿ ಹಂತಕರು ಸೇರಿದಂತೆ 8 ಅಪರಾಧಿಗಳಿಗೆ ಇಲ್ಲಿನ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ.
ಅಪರಾಧಿಗಳಾದ ಆತನ ಪತ್ನಿ ರತ್ನಮ್ಮ, ಪುತ್ರ ಅಬಿಷೇಕ್ ಅಲಿಯಾಸ್ ಅಭಿ, ಪುತ್ರಿಯರಾದ ಶಿಲ್ಪಾ, ಪುಷ್ಪಾ ಹಾಗೂ ಸುಪಾರಿ ಹಂತಕರಾದ ರೌಡಿ ಶೀಟರ್ ಕೇಶವಮೂರ್ತಿ ಅಲಿಯಾಸ್ ಕೇಸಿ, ವಡ್ಡರದೊಡ್ಡಿಯ ಮುತ್ತುರಾಜ್ ಅಲಿಯಾಸ್ ಪಪ್ಪಿ, ವೆಂಕಟೇಶ್ ಹಾಗೂ ರವಿ ಶಿಕ್ಷೆಗೊಳಗಾದವರು.
ಮೂಲತಃ ತಾಲ್ಲೂಕಿನ ಕೆಮ್ಮಾಳೆಯವರಾದ ಗಡಸಳ್ಳಿಯಲ್ಲಿ ನೆಲೆಸಿದ್ದ ನಿಂಗಪ್ಪ ಅವರನ್ನು ಅಪರಾಧಿಗಳು 2015ರ ಡಿ. 4ರಂದು ಕೊಲೆ ಮಾಡಿದ್ದರು. ಕೆಲ ವರ್ಷಗಳ ಹಿಂದೆ ರತ್ನಮ್ಮ ಪತಿಯನ್ನು ಮನೆಯಿಂದ ಹೊರಹಾಕಿದ್ದರು. ಆಗ ನಿಂಗಪ್ಪ ಗಡಸಳ್ಳಿಯಲ್ಲಿರುವ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಕನಕಪುರದ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು.