ಮಡಿಕೇರಿ, ಮಾರ್ಚ್ 5: ಕೇರಳದ ವಯನಾಡಿನಲ್ಲಿ (Wayanad) ವ್ಯಕ್ತಿ ಒಬ್ಬರನ್ನು ಇತ್ತೀಚೆಗೆ ಹತ್ಯೆ ಮಾಡಿದ್ದ ಕಾಡಾನೆಯ (Wild Elephant) ಸೆರಗೆ ಕೊಡಗು (Kodagu) ಜಿಲ್ಲೆಯ ನಾಗರಹೊಳೆ (Nagarahole) ಅಭಯಾರಣ್ಯದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಮಖಾನ್ ಹೆಸರಿನ ಕಾಡಾನೆ ಸದ್ಯ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಓಡಾಡುತ್ತಿದೆ ಎಂಬುದು ರೇಡಿಯೋ ಕಾಲರ ಮೂಲಕ ತಿಳಿದು ಬಂದಿದೆ. ಹೀಗಾಗಿ ನಾಗರಹೊಳೆಯ ನಾಣಚ್ಚಿ, ಹುಲಿಕಲ್ಲು, ಆಲಂದೋಡು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸದ್ಯ ಕಾಡಾನೆಯು ಮದವೇರಿ ನಾಗರಹೊಳೆ ಪ್ರದೇಶದಲ್ಲಿ ಅಡ್ಡಾಡುತ್ತಿದೆ. ಕ್ಷಣಕ್ಷಣಕ್ಕೂ ಸ್ಥಳ ಬದಲಾಯಿಸುತ್ತಿರುವುದರಿಂದ ಅದಕ್ಕೆ ಅರಿವಳಿಕೆ ನೀಡಲು ಪಶು ವೈದ್ಯರು ಹರಸಾಹಸಪಡುತ್ತಿದ್ದಾರೆ.
ಈ ಆನೆಗೆ ಹಾಸನದ ಬೇಲೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರೇಡಿಯೋ ಕಾಲರ್ ಅಳವಡಿಸಿದ್ದರು. ನಂತರ ಅದನ್ನು ಚಾಮರಾಜನಗರ ವ್ಯಾಪ್ತಿಯ ಕಾಡಿನಲ್ಲಿ ಬಿಡಲಾಗಿತ್ತು. ಅದು ಅಲ್ಲಿಂದ ಕೇರಳದ ವಯನಾಡಿಗೆ ತೆರಳಿತ್ತು ಎನ್ನಲಾಗಿದೆ. ಕೇರಳದ ವಯನಾಡಿನಲ್ಲಿ ಫೆಬ್ರವರಿ 10 ರಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು.