ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೂ ಆಗಾಗ ಹಾವೇರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಹೋರಿ ಬೆದರಿಸು ಸ್ಪರ್ಧೆಯನ್ನು ಆಯೋಜನೆ ಮಾಡುತ್ತಲೇ ಇದ್ದಾರೆ. ಇದರ ಪರಿಣಾಮ ಇಂದು ಹೋರಿ ತಿವಿದು ಓರ್ವ ಸಾವನಪ್ಪಿ ಹಲವರಿಗೆ ತೀವ್ರ ಗಾಯಗಳಾಗಿವೆ. ಒಂದೆಡೆ ಬಾ..ಬಾ.. ಅಖಾಡಕ್ಕೆ ಬಾ… ಬಾರೋ…. ನನ್ನ ರಾಜಾ ಎನ್ನುತ್ತಿರುವ ಹೋರಿ ಹಬ್ಬದ ಆಯೋಜಕರು. ಇನ್ನೊಂದಡೆ ಪೈಲ್ವಾನರಿಗೆ ಸೆಡ್ಡು ಹೊಡೆದು ಹಿಡಿದು ತೋರಿಸಿ ನನ್ನ ಹೋರಿ… ಎನ್ನುತ್ತಿರುವ ರೈತ ಬಾಂಧವರು. ಮೊತ್ತೊಂದಡೆ ತಲೆಗೆ ಟವಲ್ ಕಟ್ಟಿ ಹೋರಿ ಹಿಡಿದೇ ಹಿಡಿಯುತ್ತೇವೆ ಎನ್ನುತ್ತಿರುವ ಯುವಕರ ಗುಂಪು. ಇತ್ತ ಹೋರಿ ನೋಡಲು ಸೇರಿರುವ ಲಕ್ಷಾಂತರ ಜನರು. ಈ ಎಲ್ಲ ದೃಶ್ಯಾವಳಿಗಳಿಗೆ ಸಾಕ್ಷಿಯಾಗಿದ್ದು ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ.
ಜಿಲ್ಲಾಡಳಿತ ನಿಷೇಧ ಮತ್ತು ಬರಗಾಲದ ನಡುವೆಯೂ ಹಾವೇರಿ ಅನ್ನದಾತರು ತನ್ನ ಸಹಪಾಟಿ ಎತ್ತುಗಳನ್ನು ಶೃಂಗರಿಸಿ ಓಡಿಸುವುದರ ಮೂಲಕ ಸಂಭ್ರಮ ಪಟ್ಟರು. ಆದರೆ ಈ ಸಂಭ್ರಮ ಬಹಳ ಹೊತ್ತು ಉಳಿಯಲಿಲ್ಲ. ಏಕೆಂದರೆ ಹೋರಿ ತಿವಿದು ಓರ್ವ ಯುವಕ ಸಾವನ್ನಪ್ಪಿ ಹಲವರಿಗೆ ಗಾಯವಾಗಿದೆ.
ಹೋರಿ ತಿವಿತದಿಂದ ಮೃತಪಟ್ಟ 38 ವರ್ಷ ಮಂಜಪ್ಪ ಚನ್ನಪ್ಪನವರ ಅರಳೀಕಟ್ಟಿ ಗ್ರಾಮದ ನಿವಾಸಿ. ಹೋರಿ ಅಖಾಡದಲ್ಲಿ ಅರೆ ಕ್ಷಣ ಮೈಮರೆತಿದಕ್ಕೆ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇನ್ನೂ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಓರ್ವನ ಸ್ಥಿತಿ ಚಿಂತಾಜಕವಾಗಿದೆ. ಈತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದೆ. ಮೊತ್ತೊಂದಡೆ 10 ಕ್ಕೂ ಜನರಿಗೆ ಗಾಯಗಳಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಂಸಭಾವಿ ಪೊಲೀಸರು ಹೋರಿ ಬೆದರಿಸುವ ಹಬ್ಬವನ್ನು ಬಂದ್ ಮಾಡಿಸಿ ಆಯೋಜಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.