ಬೆಂಗಳೂರು, ಮಾರ್ಚ್ 4: ಬೆಂಗಳೂರಿನಲ್ಲಿ (Bengaluru) ನಡೆದ ಗುತ್ತಿಗೆದಾರರ ಸಮಾವೇಶದಲ್ಲಿ (Contractor’s Convention) ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah) ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
ಹಾಗೆಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರು ರಾಜಕೀಯದಿಂದ ನಿವೃತ್ತರಾಗುತ್ತಾರೆ ಎಂದುಕೊಳ್ಳಬೇಡಿ. ಅವರು ಹಾಗೆ ಹೇಳಲು ಕಾರಣವಿದೆ! ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಗುತ್ತಿಗೆದಾರರಿಂದ ಐದು ಪೈಸೆ ಕಮಿಷನ್ ಪಡೆದಿರುವುದು ಸಾಬೀತಾದರೂ ರಾಜಕೀಯ ನಿವೃತ್ತಿ ಘೋಷಿಸುವೆ. 2013ರಿಂದ 2018ರವರೆಗೆ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದೆ.
2023ರ ಮೇ 20ರಿಂದ 2ನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದೇನೆ. ನನ್ನ ಸೇವಾವಧಿಯಲ್ಲಿ ಗುತ್ತಿಗೆದಾರರಿಂದ 5 ಪೈಸೆ ಕಮಿಷನ್ ಪಡೆದಿಲ್ಲ. ನಾನು ಕಮಿಷನ್ ಪಡೆದಿದ್ದೇನೆ ಎಂಬುದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿಯಾಗುವೆ ಎಂದರು.
ಬಾಕಿ ಬಿಲ್ ಪಾವತಿ ಮಾಡಬೇಕೆಂದು ಗುತ್ತಿಗೆದಾರರು ಕೇಳಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಆ ಕುರಿತು 4-5 ಬಾರಿ ಸಭೆ ಮಾಡಿದ್ದೇವೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಬಾಕಿ ಬಿಲ್ ಉಳಿಸಿಕೊಂಡಿರಲಿಲ್ಲ. ಬಿಜೆಪಿ ಕಾಲದಲ್ಲಿ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರತಿಪಕ್ಷದ ವಿರುದ್ಧ ಆರೋಪ ಮಾಡಿದರು.