ಈ ವರ್ಷ ಭೀಕರ ಬರದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಗುಳೆ ಹೋಗುವವರ ಸಂಖ್ಯೆ ದುಪ್ಪಟ್ಟಾಗಿದೆ. ಕೆಲಸ ಹುಡುಕಿಕೊಂಡು ನಿತ್ಯ ಸಾವಿರಾರು ಜನರು ಗೋವಾ, ಉಡುಪಿ, ಮಂಗಳೂರು ಕಡೆಗೆ ವಲಸೆ ಹೋಗುತ್ತಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗವೊಂದರಿಂದಲೇ ಪ್ರತಿ ದಿನ ಮಂಗಳೂರಿಗೆ 22 ಬಸ್ಗಳನ್ನು ಬಿಡಲಾಗುತ್ತಿದೆ.
ಮಂಗಳೂರು ವಿಭಾಗದಿಂದ 20 ಬಸ್ಗಳು ಸಂಚರಿಸುತ್ತವೆ. ಬಾಗಲಕೋಟೆಯಿಂದ ಗೋವಾಕ್ಕೆ ಪ್ರತಿದಿನ 18 ಬಸ್ ಓಡಾಡುತ್ತಿವೆ. ಹೀಗಾಗಿ ಕೂಲಿ ಕೆಲಸ ಹುಡುಕಿಕೊಂಡು ಮಂಗಳೂರು, ಗೋವಾಕ್ಕೆ ಹೋಗಿ ಬರುವ ಪ್ರಯಾಣಿಕರಿಗಾಗಿ ಇರುವ ಬಸ್ಗಳ ಸಂಖ್ಯೆ ಭರ್ತಿ 60ಕ್ಕೇರಿದೆ. ಅನೇಕರು ಗುಂಪು ಗುಂಪಾಗಿ ಹೋಗುವ ವೇಳೆ ಖಾಸಗಿ ವಾಹನ ಮಾಡಿಕೊಂಡು ಹೋಗುತ್ತಿದ್ದಾರೆ.
ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಾಗಲಕೋಟೆ ಜಿಲ್ಲೆಯ ಎಲ್ಲ 9 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿತು. ಆಗಿನಿಂದಲೇ ಉದ್ಯೋಗ ಅರಸಿಕೊಂಡು ಗುಳೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಬಂದಿದೆ. ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಉದ್ಯೋಗ ಇಲ್ಲದ್ದರಿಂದ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮಳೆ ಆಶ್ರಿತ ತಾಲೂಕುಗಳಾದ ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ, ಬಾಗಲಕೋಟೆ ತಾಲೂಕಿನ ನೂರಕ್ಕೂ ಅಧಿಕ ಗ್ರಾಮಗಳ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುತ್ತಾರೆ. ಹಳ್ಳಿಗಳಲ್ಲಿ ಕುಟುಂಬ ಸಮೇತರಾಗಿ ಗುಳೆ ಹೋದ ಕಾರಣ ಬೀಗ ಹಾಕಿರುವ ಮನೆಗಳೇ ಹೆಚ್ಚು ಕಾಣುತ್ತವೆ. ಹುನಗುಂದ ತಾಲೂಕಿನ ಬಸರೀಕಟ್ಟಿ, ಕಡಿವಾಲ, ಮುಗನೂರ, ಅಮೀನಗಡ, ಕಮತಗಿ ಭಾಗದಲ್ಲಿ ಬರುವ ಹತ್ತಾರು ಗ್ರಾಮಗಳು, ಇಳಕಲ್ಲ ತಾಲೂಕಿನ ಕರಡಿ, ತುಂಬ, ಬೂದಿಹಾಳ, ಜಂಬಲದಿನ್ನಿ, ತುರಮರಿ, ಕಂದಗಲ್ಲ, ವಜ್ಜಲ, ಗುಡೂರ, ಗುಳೇದಗುಡ್ಡ ತಾಲೂಕಿನ ಬೂದಿನಗಡ, ಲಿಂಗಾಪುರ, ಹಾನಾಪುರ, ಹುಲ್ಲಿಕೇರಿ, ಮುರುಡಿ, ಬಾದಾಮಿ ತಾಲೂಕಿನ ಮುತ್ತಲಗೇರಿ, ಇಂಜನವಾರಿ ಸೇರಿ ಹಲವುಗ್ರಾಮಗಳ ಜನರು ಉದ್ಯೋಗ ಅರಸಿ ನಗರಗಳಿಗೆ ಹೋಗುತ್ತಾರೆ.
ಬೆಳಗಾವಿಯಲ್ಲೂ ಇದೇ ಸ್ಥಿತಿ: ಜಿಲ್ಲೆಯ 506 ಗ್ರಾಪಂ ವ್ಯಾಪ್ರಿಯ 640ಕ್ಕೂ ಅಧಿಕ ಹಳ್ಳಿಗಳಲ್ಲಿ ರೈತರು, ಕೂಲಿಕಾರರಿಗೆ ನರೇಗಾ ಯೋಜನೆ ಆಶ್ರಯವಾಗಿತ್ತು. ಆದರೆ, ನಾಲ್ಕೈದು ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ಕೂಲಿ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ಜನರು ಬೆಂಗಳೂರು, ಹೈದರಾಬಾದ್, ಬೆಳಗಾವಿ, ಮಹಾರಾಷ್ಟ್ರದ ಪುಣೆ, ಮುಂಬೈ, ಕೊಲ್ಲಾಪುರ, ಗೋವಾ ರಾಜ್ಯದ ವಾಸ್ಕೋ, ಪಣಜಿ ಸೇರಿ ಇತರ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಈಗಾಗಲೇ ಹಿಂಗಾರು ಹಂಗಾಮಿನ ಜೋಳ, ಕಡಲೆ, ಸೂರ್ಯಕಾಂತಿ ಸುಗ್ಗಿ ಮುಗಿದಿದೆ. ಕಬ್ಬು ಕಟಾವು ಸಹಿತ ಮುಗಿದಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಕೂಲಿಕಾರರು ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ. 60 ಕಾರ್ವಿುಕರು ಎರಡು ತಿಂಗಳಿಂದ ನರೇಗಾ ಕೆಲಸಕ್ಕೆ ಬರುತ್ತಿಲ್ಲ. 25 ಕೋಟಿ ರೂ.ಗೂ ಅಧಿಕ ನರೇಗಾ ಬಿಲ್ ಜಮೆ ಆಗಿಲ್ಲ ಎಂದು ಗ್ರಾಪಂ ಸದಸ್ಯರು ತಿಳಿಸಿದ್ದಾರೆ.
ನಿತ್ಯ 60 ಬಸ್ಗಳ ಸಂಚಾರ: ಮಂಗಳೂರಿಗೆ ಹೋಗುವ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಸರಾಸರಿ 60 ರಿಂದ 75 ಇರುತ್ತದೆ. ಸಂಸ್ಥೆಗೆ ಬರುವ ಆದಾಯ ಒಂದು ಬಸ್ನಿಂದ ಸರಾಸರಿ ಒಂದು ಲಕ್ಷ ರೂ. ವರೆಗೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳುತ್ತಾರೆ. ಪ್ರತಿ ದಿನ ಮಂಗಳೂರು ಮತ್ತು ಗೋವಾಕ್ಕೆ ಹೋಗಿ ಬರುವ ಕೂಲಿ ಕಾರ್ವಿುಕರ ಸಂಖ್ಯೆ ಅಂದಾಜು 3500 ರಿಂದ 4 ಸಾವಿರ ಇದೆ. ಇನ್ನು ಗುಳೆ ಹೋದವರು ಹಬ್ಬ, ಹರಿದಿನ, ಜಾತ್ರೆಗೆ ಕಡ್ಡಾಯವಾಗಿ ಊರಿಗೆ ಬರುತ್ತಾರೆ. ವಿಶೇಷವಾಗಿ ಮೊಹರಂ, ದಸರಾ, ದೀಪಾವಳಿ, ಊರ ಜಾತ್ರೆ ಸಂದರ್ಭದಲ್ಲಿ ಹೆಚ್ಚುವರಿ ಬಸ್ಗಳನ್ನು ಬಿಡಲಾಗುತ್ತಿದೆ. ಮಂಗಳೂರಿಗೆ ಹೋಗಿ ಬರುವ ಬಸ್ಗಳಲ್ಲಿ ಶೇ. 90ಕ್ಕೂ ಅಧಿಕ ಪ್ರಯಾಣಿಕರು ಕೂಲಿ ಕಾರ್ವಿುಕರು ಇರುತ್ತಾರೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಮತ್ತು ಆ ಮಾರ್ಗದಲ್ಲಿ ಡ್ಯೂಟಿ ಮಾಡುವ ಚಾಲಕ, ನಿರ್ವಾಹಕರು ಹೇಳುತ್ತಾರೆ.