ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರಕಾರಿ ಕಾಲೇಜಿನಲ್ಲಿ ಮೂವರು ಹೆಣ್ಮಕ್ಕಳ ಮೇಲೆ ದುಷ್ಟನೊಬ್ಬ ಆಯಸಿಡ್ (Acid attack) ಎರಚಿದ್ದಾನೆ. ಅಲೀನಾ ಸಿಬಿ, ಅರ್ಚನಾ, ಅಮೃತ ಎಂಬ ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡಿದ್ದಾನೆ.
ಈ ಮೂವರು ವಿದ್ಯಾರ್ಥಿನಿಯರು ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು.
ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಹ್ಯಾಟ್ ಹಾಕಿದ್ದ ಕಿರಾತಕ ಏಕಾಏಕಿ ವಿದ್ಯಾರ್ಥಿನಿಯರ ಮೇಲೆ ಆಯಸಿಡ್ ಹಾಕಿದ್ದಾನೆ. ಆಯಸಿಡ್ ಮುಖಕ್ಕೆ ಬೀಳುತ್ತಿದ್ದ ವಿದ್ಯಾರ್ಥಿನಿಯರು ಕಿರುಚಾಡಿದ್ದಾರೆ.
ಆಯಸಿಡ್ ದಾಳಿಗೆ ಒಳಗಾದ ವಿದ್ಯಾರ್ಥಿನಿಯರನ್ನು ಸ್ಥಳೀಯರು ಕಡಬ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಮೂವರು ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆಗೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕಾಲೇಜು ವರಾಂಡದಲ್ಲಿ ಪರೀಕ್ಷಾ ತಯಾರಿ ನಡೆಸುವ ವೇಳೆ ಈ ದುರ್ಘಟನೆ ನಡೆದಿದೆ.
ಆಯಸಿಡ್ ಹಾಕಿ ಆರೋಪಿ ಅಬೀನ್ ಎಂಬಾತ ಪರಾರಿ ಆಗಲು ಯತ್ನಿಸಿದ್ದ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೇರಳ ಮೂಲದ ವಿದ್ಯಾರ್ಥಿ ಎನ್ನಲಾಗಿದೆ. ಆತ ಯಾಕಾಗಿ ಈ ಕೃತ್ಯ ಎಸಗಿದ್ದಾನೆ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರ ಪೋಷಕರು ಈ ಘಟನೆಯಿಂದ ಕಂಗಲಾಗಿದ್ದು, ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ. ಕಾಲೇಜು ಆವರಣದಲ್ಲೇ ಆಯಸಿಡ್ ದಾಳಿ ನಡೆದಿರುವುದನ್ನು ಕಂಡ ಇತರೆ ವಿದ್ಯಾರ್ಥಿನಿಯರು ಆತಂಕಕ್ಕೊಳಗಾಗಿದ್ದಾರೆ.