ಬೆಂಗಳೂರು, (ಫೆಬ್ರವರಿ 29): ಕರ್ನಾಟಕದ (Karnataka) ಎಲ್ಲಾ ಅಂಗಡಿ ಮಳಿಗೆಗಳ ಬೋರ್ಡ್ಗಳಲ್ಲಿ (Kannada Board) ಶೇ.60 ರಷ್ಟು ಕನ್ನಡ ಅಳವಡಿಕೆಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಇದರಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ (karave Narayana Gowda) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ (BBMP) ಆಯುಕ್ತರ ಜತೆ ನಿನ್ನೆ(ಫೆಬ್ರವರಿ 28) ಮಾತನಾಡಿದಾಗ ಮಧ್ಯರಾತ್ರಿ ತನಕ ಗಡುವು ಅಂದಿದ್ದರು. ಅಲ್ಲದೇ ನಿಯಮ ಉಲ್ಲಂಘಿಸಿದರೆ. ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಕುರಿತು ಬಿಬಿಎಂಪಿ ಕಮೀಷನರ್ ತಿಳಿಸಿದ್ದರು. ಆದ್ರೆ, ಡಿಕೆ ಶಿವಕುಮಾರ್ ಅವರು ಇದೀಗ 2 ವಾರ ಗಡುವು ಕೊಟ್ಟಿದ್ದಾರೆ. ಸರ್ಕಾರ ಹೀಗೆ ಗಡುವು ವಿಸ್ತರಣೆ ಮಾಡ್ತಾ ಹೋದ್ರೆ ಯಾರು ಕೂಡ ನಾಮಫಲಕ ಹಾಕುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, 45 ಸಾವಿರ ವ್ಯಾಪಾರಿಗಳು ಈ ತನಕ ಕನ್ನಡದಲ್ಲಿ ನಾಮಫಲಕ ಹಾಕಿದ್ದಾರೆ. ಆಂಗ್ಲ ಫಲಕಕ್ಕೆ ಕೇವಲ ಬಟ್ಟೆ ಮುಚ್ಚಿದ್ದಾರೆ. ಆದರೆ ಇಂತಹ ಮೂರ್ಖತನಕ್ಕೆ ನಾವು ಅವಕಾಶ ಕೊಡುವುದಿಲ್ಲ. ಸರ್ಕಾರ, ಬಿಬಿಎಂಪಿ ಬಿಟ್ಟರೂ ಕರ್ನಾಟಕ ರಕ್ಷಣಾ ವೇದಿಕೆ ಬಿಡುವುದಿಲ್ಲ. ಹೀಗೆ ಗಡುವು ಕೊಟ್ಟರೆ ಯಾರು ಕೂಡ ಸರ್ಕಾರದ ಮಾತಿಗೆ ಬೆಲೆ ಕೊಡುವುದಿಲ್ಲ. ಸರ್ಕಾರ ಎರಡು ವಾರ ಕಾಯಲಿ , ನಾವು ಕೂಡ ಕಾಯುತ್ತೇವೆ. ಇನ್ನೂ ಕೂಡ ಆಂಗ್ಲ ಫಲಕ ಇದ್ದರೆ ನಮ್ಮ ಕಾರ್ಯಕರ್ತರು ಕಿತ್ತು ಹಾಕುತ್ತಾರೆ. ಈ ರಾಜ್ಯದಲ್ಲಿ ವ್ಯಾಪಾರ ಮಾಡಬೇಕು, ಬದುಕಬೇಕು ಅಂದರೆ ನಮ್ಮ ನೆಲಕ್ಕೆ, ಭಾಷೆಗೆ ಗೌರವ ಕೊಡಿ ಎಂದು ಹೇಳಿದರು.